ನಾಟ್ಕದೂರು ಕಟ್ಟಿ ರಾಷ್ಟ್ರ ರಂಗಭೂಮಿಯ ಚಿತ್ತ ತನ್ನತ್ತ ಸೆಳೆದ ಕಲಾವಿದ ಸುಕುಮಾರ್ ಮೋಹನ್ ಕತೆ ಒಮ್ಮೆ ಕೇಳಿ!

ರಂಗಭೂಮಿಯ ಸೆಳೆತಕ್ಕೊಳಗಾಗಿ, ಆ ರಂಗದಲ್ಲಿ ಸಾಧಿಸುವ ಮಿಡಿತ ಮನದೊಳಗೆ ತುಡಿತವಾಗಿ ಬಿಟ್ಟರೆ, ರಾಜ್ಯ,ದೇಶ-ಭಾಷೆಗಳನ್ನು ಮೀರಿ ಅದ್ಭುತವಾಗಿ ಬೆಳೆಯಬಹುದೆಂಬುವುದಕ್ಕೆ ಈ ಕಲಾವಿದ ಸಾಕ್ಷಿ. ಪುಟ್ಟ ಊರು ಮುದ್ರಾಡಿಯಲ್ಲಿ ರಂಗಭೂಮಿ ಕಲಾಸಂಘಟನೆ ಕಟ್ಟಿ ಮುದ್ರಾಡಿ ಅನ್ನೋ ಊರನ್ನು ನಾಟ್ಕದೂರಾಗಿ ಪರಿವರ್ತಿಸಿದ ಕಲಾವಿದ ಸುಕುಮಾರ್ ಮೋಹನ್ ಅವರ ಕತೆಯಿದು.

ಹೈದರಾಬಾದ್, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ಮುಂಬಯಿ, ಪೂನಾ, ಮೈಸೂರು, ಬೆಂಗಳೂರು ಮಾತ್ರವಲ್ಲದೆ ನಾನಾ ಕಡೆಯ ಹೆಸರಾಂತ ಥಿಯೇಟರ್/ರೆಫೆರ್ಟರಿಗಳ ಪ್ರಬುದ್ಧ ನಾಟಕ ತಂಡಗಳು ಕನಸುಗಳ ಕಥೆ ಕಟ್ಟಿ ಕರ್ನಾಟಕದ ಉಡುಪಿ ಜಿಲ್ಲೆಯ ತೀರಾ ಹಳ್ಳಿಪ್ರದೇಶ ಮುದ್ರಾಡಿಯ ‘ನಾಟ್ಕದೂರಿನಲ್ಲಿ ತಮ್ಮ ನಾಟಕಗಳ ಪ್ರದರ್ಶನ ನೀಡಿ ಈ ಹಳ್ಳಿಜನತೆಯ ನಾಟಕ ಪ್ರೀತಿಗೆ ಮಾರು ಹೋಗುತ್ತಾರೆ, ಮತ್ತೆ ಹಿಂತಿರುಗಿ ಹಳ್ಳಿ ಥಿಯೇಟರನ್ನು ದಿಲ್ಲಿಗೆ ಮುಟ್ಟಿಸುತ್ತಾರೆ ಎಂದಾದರೆ ಇದರ ಹಿಂದೆ ಇರುವ ಆ ಚೇತನ ‘ಮುದ್ರಾಡಿಯ ನಮತುಳುವೆರ್ ಕಲಾ ಸಂಘಟನೆ(ರಿ.) ಮುದ್ರಾಡಿ ಮತ್ತು ಅದರ ರುವಾರಿ ಕಲಾವಿದ ಸುಕುಮಾರ್ ಮೋಹನ್.

   ಮುದ್ರಾಡಿ ಮಣ್ಣಲ್ಲಿ ನಾಟ್ಕದ ಘಮ: 

ಖ್ಯಾತ ಕಲಾವಿದರು, ರಂಗಕರ್ಮಿಗಳಾದ ಹೆಗ್ಗೋಡು ಪ್ರಸನ್ನ, ನಾಗತಿಹಳ್ಳಿ ಚಂದ್ರಶೇಖರ್, ಬಿ.ಜಯಶ್ರೀ, ಹಂಸಲೇಖ, ಟಿ.ಎಸ್.ನಾಗಾಭರಣ, ಮುಖ್ಯಮಂತ್ರಿ ಚಂದ್ರು, ಬಿ.ಸುರೇಶ್, ಉಮಾಶ್ರೀ, ಎಚ್.ಎಸ್.ಶಿವಪ್ರಕಾಶ್, ಕಪ್ಪಣ್ಣ ಇಂತಹ ಹತ್ತಾರು ಮೇರು ಕಲಾವಿದರು ಈ ನಾಟ್ಕದೂರಿನ ನೆಲದಲ್ಲಿ ಓಡಾಡಿ, ಇಲ್ಲಿಯ ನಾಟಕಗಳನ್ನು ವೀಕ್ಷಿಸಿ, ನಮತುಳುವೆರ್ ಸಂಘಟನೆಯ ರಾಷ್ಟ್ರೀಯ ಗೌರವವನ್ನು ಈ ‘ಹಳ್ಳಿ ಥಿಯೇಟರ್’ನಲ್ಲಿ ಸ್ವೀಕರಿಸಿ ಪುಳಕಿತರಾಗಿದ್ದಾರೆಂದಾರೆ ಇದು ಸಣ್ಣ ಮಾತಲ್ಲ.

ಅವಿಭಜಿತ ದ.ಕ, ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಮಾತ್ರವಲ್ಲದೆ ನಿರಂತರ ಹತ್ತು ವರ್ಷಗಳಿಂದ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸುತ್ತಾ ರಾಷ್ಟ್ರಮಟ್ಟದ ಸಾಧಕ ರಂಗಪ್ರಕ್ರಿಯೆಯಿಂದ ಒಂದು ಊರಿನ ಹೆಸರನ್ನೇ ‘ನಾಟ್ಕದೂರು’ ಎಂದು ಕರೆಯುವಂತಹ ಪರಿವರ್ತನೆಗೆ ಮುನ್ನುಡಿ ಬರೆದದ್ದು ಈ ಸಂಘಟನೆ.

ನಾಟ್ಕೋತ್ಸವ ಅನ್ನೋ ರಂಗದ ಗುಂಗು:

ಈ ನಾಟ್ಕದೂರಿನಲ್ಲಿ 1997ರಿಂದ ಸುಕುಮಾರ್ ಮೋಹನ್‍ರ ಅಧ್ಯಕ್ಷತೆಯಲ್ಲಿ ನಿರಂತರ 23 ವರ್ಷಗಳಿಂದ ರಂಗ ಚಟುವಟಿಕೆಗಳು ನಡೆಯುತ್ತಾ ಬರುತಿದ್ದು, ಪ್ರತೀ ವರ್ಷ ರಾಷ್ಟ್ರೀಯ ನಾಟಕೋತ್ಸವ, 9 ದಿನಗಳ ನವರಂಗೋತ್ಸವ, ರಂಗಚಳುವಳಿ, ಮಕ್ಕಳ ನಾಟ್ಕೋತ್ಸವ, ಯಕ್ಷೋತ್ಸವ, ಜಾನಪದ ಕಲಾ ಶಿಬಿರ-ಪ್ರದರ್ಶನ, ರಂಗ ಸಂವಾದಗಳು, ತರಬೇತಿಗಳು, ಬೀದಿನಾಟಕ, ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ರಾಜ್ಯ-ರಾಷ್ಟ್ರಗಳಲ್ಲಿ ಸೇವೆಗೈಯುವ ಅಪ್ರತಿಮ ಹಿರಿಯ ರಂಗತಜ್ಞರಿಗೆ ಪ್ರತಿಷ್ಠಿತ “ನಾಟ್ಕ ಸಮ್ಮಾನ” ನೀಡಿ ಗೌರವಿಸುವುದು, ಹೀಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ರಂಗಭೂಮಿಯ ಜೀವಂತಿಕೆಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಗ್ರಾಮೀಣ ಪರಿಸರದಲ್ಲಿ 2007ರಲ್ಲಿ ವಿಂಶತಿ ಉತ್ಸವಕ್ಕೆ 20ದಿನಗಳ ನಾಟ್ಕೋತ್ಸವ ನಡೆಸಿರುವುದು. ರಾಜ್ಯಕ್ಕೆ ಹೆಮ್ಮೆ.

ಇತಿಹಾಸ ಬರೆದ ಕಲಾ ಕುಟುಂಬ:

125 ವರ್ಷಗಳ ಇತಿಹಾಸವಿರುವ 100ರಷ್ಟು ಕಲಾವಿದರು/ತಂತ್ರಜ್ಞರನ್ನೊಳಗೊಂಡ ತೆಲುಗಿನ ‘ಸುರಭಿ’ ನಾಟಕ ತಂಡ ತನ್ನ ಒಂದೇ ಕುಟುಂಬದ 68 ಜನರನ್ನು ‘ನಾಟಕವೇ ಸಂಸಾರ’ವಾಗಿಸಿಕೊಂಡು ಚಾರಿತ್ರಿಕ ಕಲಾಸೇವೆ ಮಾಡುತ್ತಿರುವುದು ಒಂದು ಕಡೆ ದಾಖಲೆಯಾದರೆ, ತನ್ನ ಚಿಕ್ಕ ಕುಟುಂಬದ ಏಳೂ ಜನ ಸದಸ್ಯರನ್ನು ‘ಕಲೆಯೇ ಬದುಕು’ ಎಂಬ ಧ್ಯೇಯದೊಂದಿಗೆ ಕಲಾ ಸಾಮ್ರಾಜ್ಯಕ್ಕೆ ಕುಟುಂಬವನ್ನೇ ಅರ್ಪಿಸಿ, ಮಾಡಿದ ಅಗಾಧ ಸಾಧನೆ ಕೂಡ ಮುಂದಿನ ಇತಿಹಾಸಕ್ಕೆ ದಾಖಲೆ.

ಬಡತನದ ಬೇಗೆಯಲ್ಲೂ ಸುಕುಮಾರ್ ಮೋಹನ್ ತನ್ನ ತಂದೆ, ಮೋಹನ್ ಪಾತ್ರಿ, ತಾಯಿ ಕಮಲಾ ಎಂ.ಪಿ, ಇವರ ಆಶೀರ್ವಾದದ ಬಲದಿಂದ ಪತ್ನಿ ವಾಣಿ ಸುಕುಮಾರ್, ಅಕ್ಕ ಸುಗಂಧಿ, ಬಾವ-ಉಮೇಶ್ ಕಲ್ಮಾಡಿ, ಸಹೋದರರಾದ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್ ಜೊತೆಗೆ ನಾದಿನಿ ಇವರೆಲ್ಲರನ್ನು ಸಂಸಾರದ ಕಟ್ಟುಪಾಡುಗಳ ಭೇದವಿಲ್ಲದೆ ಶಾರದೆಯ ಕುಸುಮಗಳಂತೆ ಬೆಳೆಸಿ ಇಂದು ಇವರೆಲ್ಲರೂ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಕಲಾವಿದರನ್ನಾಗಿ ರೂಪುಗೊಳಿಸುವಲ್ಲಿ ಪಟ್ಟ ಶ್ರಮ ಅವಿಸ್ಮರಣೀಯ.

ಸಾವಿರಕ್ಕೂ ಮಿಕ್ಕಿದ ನಾಟಕ ಪ್ರದರ್ಶನ:

1500ಕ್ಕೂ ಹೆಚ್ಚು ಪ್ರದರ್ಶನ ಕಂಡ ಈ ತಂಡದ 25ಕ್ಕಿಂತಲೂ ಹೆಚ್ಚಿನ ನಾಟಕಗಳಲ್ಲಿ ಅಚ್ಚಳಿಯದೆ ಉಳಿಯುವುದು, ‘ಪಿಲಿಪತ್ತಿ ಗಡಸ್’, ‘ಮೂರು ಲೋಕ ಮೂರು ಹೆಜ್ಜೆ’, ‘ಹಳಿಯ ಮೇಲಿನ ಸದ್ದು’, ‘ಪಟ್ಟೆ ತತ್ತ್‍ಂಡಾ’, ‘ದಶಾನನ ಸ್ವಪ್ನಸಿದ್ಧಿ’, ಮುಂತಾದುವುಗಳು. ಇವೆಲ್ಲವುದರಲ್ಲಿ ನಟಿಸಿ ಕೆಲವೊಂದಕ್ಕೆ ನಿರ್ದೇಶನವನ್ನೂ ಮಾಡಿದ ಸುಕುಮಾರ್ ಮೋಹನ್‍ರಿಗೆ ‘ಪಿಲಿಪತ್ತಿ ಗಡಸ್’-23 ಬಾರಿ ಹಾಗೂ ‘ಅಸುದ್ಧ’ ನಾಟಕಕ್ಕೆ 7ಬಾರಿ ಮಾತ್ರವಲ್ಲದೆ ಹಲವಾರು ನಾಟಕಗಳಲ್ಲಿ ಉತ್ತಮ ನಟ ಪ್ರಶಸ್ತಿಗಳು ಹರಿದು ಬಂದಿದೆ.

ದುಬೈನಲ್ಲಿ ನಡೆದ ಕಾರ್ನಾಡ್‍ರವರ ‘ಹೂ’ (ಏಕವ್ಯಕ್ತಿ ಪ್ರದರ್ಶನ), ‘ಬರ್ತ್‍ಡೇ ಗಿಫ್ಟ್’, ಪಾತ್ರಧಾರಿಣಿ’, ಕೋರ್ಟ್ ಮಾರ್ಷಲ್’ ತಲಾ ಐದೈದು ಪ್ರದರ್ಶನಗಳನ್ನು ಕಂಡು ತುಳುನಾಡನ್ನೂ, ನಾಟಕವನ್ನೂ ಕೊಲ್ಲಿ ರಾಷ್ಟ್ರಗಳಲ್ಲಿ ಮಿಂಚಿಸಿದ ಸಾಧನೆ ಒಂದು ಇತಿಹಾಸ.

ಹೆಸರಾಂತ ನಿರ್ದೇಶಕರ ಸಂಗಮ:

ಪ್ರಸನ್ನ ಹೆಗ್ಗೋಡ್, ಕಷ್ಣಮೂರ್ತಿ ಕವತ್ತಾರ್, ಬಾಸುಮ ಕೊಡಗು, ಜಿ.ಸೀತಾರಾಮ್ ಶೆಟ್ಟಿ ಕುರಾಡಿ, ಜೀವನ್‍ರಾಮ್ ಸುಳ್ಯ, ಪ್ರಮೋದ್ ಶಿಗ್ಗಾಂ, ಉದ್ಯಾವರ ನಾಗೇಶ್, ಗೋಪಾ¯ಕೃಷ್ಣ ನಾಯರಿ, ಸಿ.ಬಸವಲಿಂಗಯ್ಯ, ಶೀನಾ ನಾಡೋಳಿ, ಗುರುರಾಜ್ ಮಾಪಳ್ಳಿ, ಶ್ರೀಪಾದ್ ಭಟ್, ಏಣಗಿ ಬಾಳಪ್ಪ, ರಾಜಾರಾಮ್, ಯಶವಂತ ಎನ್.ಎಸ್.ಡಿ, ಮಂಜುನಾಥ್ ಬಡಿಗೇರ್, ಮೈಮ್ ರಮೇಶ್, ಚಂದ್ರನಾಥ ಬಜಗೋಳಿ, ರಾಮ್ ಶೆಟ್ಟಿ ಹಾರಾಡಿಯವರಂತಹ ಹಲವಾರು ನಾಟಕ ನಿರ್ದೇಶಕರು, ವಿಮರ್ಶಕರು, ಕೃತಿಕಾರರು ‘ನಾಟ್ಕದೂರಿನ’ ರಂಗಪ್ರಯೋಗಗಳಲ್ಲಿ ಅಪರಿಮಿತ ಸೇವೆ ಸಲ್ಲಿಸಿದ್ದಾರೆ.

ಅತ್ಯಾಧುನಿಕ ಓಪನ್ ಥಿಯೇಟರ್:

ಕರಾವಳಿ ಭಾಗದಲ್ಲಿರುವ ಏಕೈಕ ಅತ್ಯುತ್ತಮ ಮತ್ತು ಅತ್ಯಾಧುನಿಕವಾದ ಬಯಲು ರಂಗಮಂದಿರ, ನಾಟ್ಕದೂರಿಗೆ ಚಿನ್ನದ ಮುಕುಟ. 1,000  ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ‘ಚೌಟರ ಚಾವಡಿ’ ಪ್ರೇಕ್ಷಾಂಗಣ, 250 ಚ.ಅಡಿ ವಿಸ್ತೀರ್ಣವುಳ್ಳ ಬೃಹತ್ ವೇದಿಕೆ, ಸುಮಾರು 100 ಕಲಾವಿದರಿಗೆ ಬೇಕಾದ ವಸತಿಗೆ ಸ್ಥಳಾವಕಾಶವಿರುವ ‘ಆರೂರು ಕೃಷ್ಣಮೂರ್ತಿ ರಾವ್’ ಬಯಲು ರಂಗಮಂದಿರ 2019ರಲ್ಲಿ ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಗೊಂಡಿರುವುದರ ಮೂಲಕ ‘ಹಳ್ಳಿ ಥಿಯೇಟರ್ ನಾಟ್ಕದೂರು’ ರಾಷ್ಟ್ರದ ಗಮನ ಸೆಳೆಯುತ್ತಿದೆ.

ನಾಟ್ಕದೂರಿನ ಬಗ್ಗೆ ಇವರು ಏನಂತಾರೆ?

ವೈಯಕ್ತಿವಾದ ಇತರ ಏನೇ ಕೆಲಸ-ಉದ್ಯೋಗಗಳಿದ್ದರೂ ನಾಟ್ಕದೂರು ಮುದ್ರಾಡಿಯಲ್ಲಿ ಒಂದು ಸಂಜೆಯ ಕಾಲ ಇಡೀ ಕುಟುಂಬ ಒಂದು ತಂಡವಾಗಿ ಬಹಳಷ್ಟು ಶ್ರಮ ಪಟ್ಟು. ಒಂದು ತಲೆಮಾರನ್ನು ಸಾಂಸ್ಕøತಿಕವಾಗಿ ಜಾಗೃತಗೊಳಿಸಿ, ಇಡೀ ಭಾರತೀಯ ರಂಗಭೂಮಿಗೆ ಅನನ್ಯ ಕೊಡುಗೆ ನೀಡುತ್ತಾ ಬಂದಿರುವ ಸುಕುಮಾರ್ ಮೋಹನ್‍ರ ನಮತುಳುವೆರ್ ಸಂಘಟನೆ ರಂಗಭೂಮಿಗೆ ಮಾದರಿ. ಇಂತಹ ಸಾಧಕರಿಗೆ ಅಕಾಡೆಮಿಯ ಸಹಕಾರ ಪ್ರಶಸ್ತಿ ಪುರಸ್ಕಾರಗಳು ಸಿಗಲಿ
ಬಿ.ಸುರೇಶ್ -ಚಿತ್ರ ನಿರ್ದೇಶಕರು/ನಿರ್ಮಾಪಕರು, ರಂಗತಜ್ಞರು

—————————————————————–

ಸಣ್ಣ ಹಳ್ಳಿಯಲ್ಲಿ ದೊಡ್ಡ ಸೇವೆ, ರಂಗ ಚಟುವಟಿಕೆಗಳ ಜಾಗೃತಿಗಾಗಿ ರಂಗ ಉತ್ಸವ, ಯೋಗ್ಯ ರಂಗತಜ್ಞರಿಗೆ ರಂಗ ಸಮ್ಮಾನ್ ಪುರಸ್ಕಾರ. ಇದು ರಾಷ್ಟ್ರ ಮಟ್ಟದಲ್ಲಿ ರಂಗಭೂಮಿಗೆ ನಾಟ್ಕದೂರು ಮುದ್ರಾಡಿ ನಮ ತುಳುವೆರ್ ಸಂಘಟನೆಯ ಬಹಳ ದೊಡ್ಡ ಉಪಕಾರ. ಸುಕುಮಾರ್ ಮೋಹನ್‍ರ ಈ ಕಾರ್ಯಕ್ಕೆ ಸರಕಾರ ಮಾತ್ರವಲ್ಲದೆ, ನಾಡಿನ ಸಮಸ್ತ ಕಲಾಸಕ್ತರ ಸಹಕಾರ ಮತ್ತು ಪ್ರೋತ್ಸಾಹ ಸಿಗಬೇಕಾಗಿದೆ.
ಎಚ್.ಎಸ್.ಶಿವಪ್ರಕಾಶ್ (ಹಿರಿಯ ರಂಗಕರ್ಮಿ)

—————————

 ನಮತುಳುವೆರ್ ಕಲಾ ಸಂಘಟನೆ’, ಕಲೆ-ಕಲಾವಿದರಿಗಾಗಿ ಅವಿರತವಾದ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದು ಇವತ್ತು ರಾಷ್ಟ್ರ ಮಟ್ಟದ ರೆಫರ್ಟ್‍ರಿಗಳನ್ನು, ಕಲಾವಿದರನ್ನೂ, ರಂಗತಂತ್ರತ್ಞನ್ನು, “ನಾಟ್ಕದೂರು” ಎಂಬ ಪ್ರಕೃತಿಯ ನಿಜಗುಣದ ಮಡಿಲಿಗೆ ಓಲೈಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇವರ ಈ ಕಾರ್ಯಕ್ಕೆ ಎಲ್ಲಾ ರಂಗಾಸಕ್ತರ ಸಹಕಾರ ದೊರೆಯಲಿ.

 

-ಮುಖ್ಯಮಂತ್ರಿ ಚಂದ್ರು (ಹಿರಿಯ ಚಿತ್ರನಟರು, ರಂಗಕರ್ಮಿ)

ಬರಹ: ಚಂದ್ರನಾಥ ಬಜಗೋಳಿ