ಬಾರ್ಕೂರು: ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಬಾರ್ಕೂರು ಎಜುಕೇಶನಲ್ ಸೊಸೈಟಿ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಯುಕ್ತವಾಗಿ ಮಹತ್ವದ ಯೋಜನೆ ಆರಂಭಿಸಿದೆ. ಇದರ ಅಂಗವಾಗಿ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಏಪ್ರಿಲ್ 5ರಂದು ವಿದ್ಯಾರ್ಥಿವೇತನ ಪರೀಕ್ಷೆ ನಡೆಯಲಿದೆ. 1946ರಲ್ಲಿ ಸ್ಥಾಪಿತವಾದ ಬಾರ್ಕೂರು ಎಜುಕೇಶನಲ್ ಸೊಸೈಟಿ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದು, ಇದೀಗ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಜೊತೆ ಕೈಜೋಡಿಸಿ ಸಂಸ್ಥೆಯನ್ನು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಾಗಿ ಪರಿವರ್ತಿಸಲಾಗಿದೆ ಎಂದು ಶಾಂತಾರಾಮ ಶೆಟ್ಟಿ ಅವರು ತಿಳಿಸಿದರು. ಸುಜ್ಞಾನ ನ್ಯಾಷನಲ್ ಕಾಲೇಜು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನ ಪರೀಕ್ಷೆ ಆಯೋಜಿಸಲಾಗಿದೆ. ಈ ಪರೀಕ್ಷೆಯ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಹಾಗೂ ಆರ್ಥಿಕವಾಗಿ ಹಿಂದುಳಿದ ಮೇರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.
ಖಜಾಂಚಿ ಭರತ್ ಶೆಟ್ಟಿ ಮಾಹಿತಿ ನೀಡಿ, CET, NEET, JEE ಹಾಗೂ CA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಈಗ ಬಾರ್ಕೂರಿನಲ್ಲೇ ಲಭ್ಯವಾಗಲಿದೆ. ಎಪ್ರಿಲ್ 5ರಂದು ಬೆಳಿಗ್ಗೆ 9.30ರಿಂದ ನಡೆಯುವ ಈ ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ, CBSE ಹಾಗೂ ICSE ವಿದ್ಯಾರ್ಥಿಗಳು ಹಾಜರಾಗಬಹುದು. ಪರೀಕ್ಷೆಗೆ ಬರುವವರು ಆಧಾರ್ ಕಾರ್ಡ್, ಪೆನ್, ಪೆನ್ಸಿಲ್ ಹಾಗೂ ಎಕ್ಸಾಮ್ ಪ್ಯಾಡ್ ತರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

















