ನಾಟ್ಯಶಾಸ್ತ್ರದ 108 ಕರಣಗಳ ಯಶಸ್ವಿ ಪ್ರದರ್ಶನ: ತನುಶ್ರೀ ಮುಡಿಗೆ 8ನೇ ವಿಶ್ವದಾಖಲೆ

ಉಡುಪಿ: ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ 7 ವಿಶ್ವದಾಖಲೆಗಳನ್ನು ಮುಡಿಗೇರಿಸಿಕೊಂಡಿರುವ ಉಡುಪಿಯ ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರು ನಾಟ್ಯ ಶಾಸ್ತ್ರದಲ್ಲಿ 8ನೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಟ್ಯಶಾಸ್ತ್ರದ 108 ಕರಣಗಳ ಭಂಗಿಗಳನ್ನು 3 ನಿಮಿಷ 29 ಸೆಕೆಂಡ್‌ ನಲ್ಲಿ ಪ್ರಸ್ತುತಪಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾದರು.

ಕಾಲು, ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವ ಕರಣಗಳ ಮೂಲ ಎನ್ನಲಾಗುತ್ತದೆ. ಪ್ರತೀ ಕರಣವನ್ನು ಚಲನೆಯಂತೆ ಅಭ್ಯಾಸ ಮಾಡಲಾಗಿದ್ದು, ಇದು ಕೇವಲ ಭಂಗಿಯಲ್ಲ. 108 ನಾಟ್ಯಶಾಸ್ತ್ರದಲ್ಲಿ ಇದನ್ನು ಕ್ರೋಢಿಕರಿಸಲಾಗಿದೆ ಎಂದು ತನುಶ್ರೀ ಅವರ ಗುರು ಶ್ರೀರಾಮಕೃಷ್ಣ ಕೊಡಂಚ ತಿಳಿಸಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ಗೌರವ್ ಮಿತ್ತಲ್ ಅವರು ದಾಖಲೆಯ ಪ್ರಮಾಣಪತ್ರವನ್ನು ತನುಶ್ರೀ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಸೈಂಟ್ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಪಿತ್ರೋಡಿ ಅವರು 8ನೇ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದು, ಒಂದು ಗಿನ್ನೆಸ್ ರೆಕಾರ್ಡ್, 7 ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.