ಉಡುಪಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಹೆರಿಗೆ: ತಾಯಿ, ಮಗು ಸುರಕ್ಷಿತ  

ಉಡುಪಿ: ಕೋವಿಡ್ 19 ಸೋಂಕಿದ್ದ ಕಾರ್ಕಳ ತಾಲ್ಲೂಕಿನ 22 ವರ್ಷದ ತುಂಬು ಗರ್ಭಿಣಿಗೆ ಉಡುಪಿ ಡಾ. ಟಿಎಂಎ ಪೈ ಕೋವಿಡ್ 19 ಆಸ್ಪತ್ರೆಯಲ್ಲಿ ಯಶಸ್ವಿ ಹೆರಿಗೆ ಮಾಡಲಾಗಿದೆ.
ಈ ಗರ್ಭಿಣಿ ಜೂನ್ 16 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನವೇ ಗರ್ಭಿಣಿಗೆ ತುರ್ತು ಸಿಸೇರಿಯನ್ ಹೆರಿಗೆ ಮಾಡಲಾಗಿತ್ತು. ಇದೀಗ ತಾಯಿ ಚೇತರಿಸಿಕೊಳ್ಳುತ್ತಿದ್ದು, ನವಜಾತ ಶಿಶು ಆರೋಗ್ಯವಾಗಿದೆ.
ಪ್ರಸೂತಿ ತೊಂದರೆ ಕಾರಣಗಳಿಂದಾಗಿ ಈ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಜಿಲ್ಲೆಯಲ್ಲಿ ಕೋವಿಡ್-19  ರೋಗಿಗೆ ಇದು ಮೊದಲ ಶಸ್ತ್ರಚಿಕಿತ್ಸೆ.  ಪ್ರಸೂತಿ ಶಸ್ತ್ರಚಿಕಿತ್ಸಕರಾದ ಡಾ. ಶಶಿಕಲಾ ಕೆ ಭಟ್ ಮತ್ತು ಡಾ. ಸುರಭಿ ಸಿನ್ಹಾ ಮತ್ತು ಅರಿವಳಿಕೆ ತಜ್ಞ ಡಾ.ರೋಶನ್ ಶೆಟ್ಟಿ ಅವರ ತಂಡಕ್ಕೆ ವೆರೋನಿಕಾ, ಅಶ್ವಿನಿ ಮತ್ತು ಜಯಶ್ರೀ ಅವರ ಶುಶ್ರೂಷಾ ತಂಡ ಯಶಸ್ವಿ ಹೆರಿಗೆ ಮಾಡಿದೆ.  ನವಜಾತ ಶಿಶುವಿನ ಆರೈಕೆಯನ್ನು ಡಾ. ಆಶಿಶ್ ಗುಪ್ತಾ ಮತ್ತು ಡಾ.ಚೈತನ್ಯ ಅವರು ನೋಡಿಕೊಂಡರು.
ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಉಡುಪಿಯ ಜನರಿಗೆ ಸೇವೆ ಸಲ್ಲಿಸುತ್ತಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಂಬಂಧಿತ ಆಸ್ಪತ್ರೆಯಾದ ಡಾ. ಟಿಎಂಎ ಪೈ ಆಸ್ಪತ್ರೆ ಈ ವರ್ಷದ ಏಪ್ರಿಲ್ ಒಂದನೇ ತಾರೀಖಿನಿಂದ ಕೋವಿಡ್ -19ಗೆ ಮೀಸಲಾದ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್-19 ರೋಗಿಗಳಿಗೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ, ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.