ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
ಅರ್ಜಿ ಸಲ್ಲಿಸಲಾಗುವ ಕೃಷಿ ನವೋದ್ಯಮಗಳ ಪೈಕಿ ಅರ್ಹ ನವೋದ್ಯಮಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿ, ಹೊಸ ಕೃಷಿ ನವೋದ್ಯಮಗಳಿಗೆ ಶೇ. 50ರಷ್ಟು ಕನಿಷ್ಠ 5 ಲಕ್ಷ ರೂ. ಗಳಿಂದ ಗರಿಷ್ಠ 20 ಲಕ್ಷ ರೂ. ಹಾಗೂ ಈಗಾಗಲೇ ಸ್ಥಾಪಿಸಲಾದ ಕೃಷಿ ನವೋದ್ಯಮಗಳ ವಿಸ್ತರಣೆಗೆ ಕನಿಷ್ಠ 20 ಲಕ್ಷ ರೂ.ಗಳಿಂದ ಗರಿಷ್ಠ 50 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುವುದು. ಇದರೊಂದಿಗೆ
ಆಯ್ಕೆಯಾದ ಕೃಷಿ ನವೋದ್ಯಮಗಳ ಸಾಮರ್ಥ್ಯಾಭಿವೃದ್ಧಿಗಾಗಿ ವಿವಿಧ ತರಬೇತಿ ಕೇಂದ್ರಗಳಲ್ಲಿ ಹಾಗೂ ಇನ್ಕ್ಯುಬೇಷನ್ ಸೆಂಟರ್ಗಳಲ್ಲಿ ತರಬೇತಿ ನೀಡಲಾಗುವುದು.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.