ರಾಜ್ಯದ ಗಡಿಭಾಗದ ವಿದ್ಯಾರ್ಥಿಗಳಿಗೂ ಸಿಗಲಿದೆ ಫ್ರೀ ಬಸ್ ಪಾಸ್: ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

ಬೆಂಗಳೂರು: ರಾಜ್ಯದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿ ಕೆಲವು ವಾರಗಳೇ ಕಳೆದಿದೆ,ಇದೀಗ ರಾಜ್ಯದ ಗಡಿ ಭಾಗದ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್ ಪಾಸ್ ಸೇವೆಯನ್ನು ವಿಸ್ತರಿಸಿ ಸರಕಾರ ಶುಭಸುದ್ದಿ ನೀಡಿದೆ.ಹೌದು ನಾಲ್ಕೂ ರಾಜ್ಯ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಉಚಿತ ಬಸ್ ಪಾಸ್’ ಯೋಜನೆಗೆ ಅಧಿಕೃತ ಆದೇಶ ಹೊರಡಿಸಿದೆ. ಜೂನ್ 11ರಂದು ಹೊರಬಿದ್ದ ಆದೇಶದಂತೆ, ರಾಜ್ಯದ ಎಲ್ಲಾ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ.

ಯೋಜನೆಯ ವಿಶೇಷತೆಯಾಗಿ ಗಡಿಭಾಗದ ವಿದ್ಯಾರ್ಥಿಗಳಿಗೂ ಸೌಲಭ್ಯ ವಿಸ್ತರಿಸಲಾಗಿದೆ. ಕರ್ನಾಟಕದಲ್ಲಿ ವಾಸವಿದ್ದು ನೆರೆರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ನೆರೆರಾಜ್ಯಗಳಲ್ಲಿ ವಾಸವಿದ್ದು ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಸ್‌ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಸಂಚರಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ, ವೈಯಕ್ತಿಕ ವಿವರಗಳು, ಶಿಕ್ಷಣ ಸಂಸ್ಥೆಯ ಮಾಹಿತಿ ಹಾಗೂ ಪ್ರಯಾಣದ ಮಾರ್ಗದ ವಿವರಗಳನ್ನು ದಾಖಲಿಸಿ, ಭಾವಚಿತ್ರ ಮತ್ತು ದಾಖಲಾತಿ ಪುರಾವೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ಬಳಿಕ ಸ್ವೀಕೃತಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.

ಈಗಾಗಲೇ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆದು ಹಣ ಪಾವತಿಸಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕವನ್ನು 15 ದಿನಗಳೊಳಗೆ ಮರುಪಾವತಿಸುವಂತೆ ಸರ್ಕಾರ ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡಿದೆ. ಈಗಾಗಲೇ ವಿತರಿಸಲಾದ ಬಸ್ ಪಾಸ್‌ಗಳು ಯಥಾಸ್ಥಿತಿಯಲ್ಲಿ ಚಾಲ್ತಿಯಲ್ಲಿರಲಿವೆ.

ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಸರ್ಕಾರ ಸುಮಾರು 286.08 ಕೋಟಿ ರೂಪಾಯಿ ವೆಚ್ಚ ಭರಿಸಲಿದ್ದು, ಪಾಸ್ ಶುಲ್ಕ ಹಾಗೂ ಅಪಘಾತ ಪರಿಹಾರ ನಿಧಿ ಸೇರಿದಂತೆ ಹೆಚ್ಚುವರಿಯಾಗಿ ಸುಮಾರು 15 ಕೋಟಿ ರೂಪಾಯಿಗಳನ್ನು ಸಾರಿಗೆ ನಿಗಮಗಳಿಗೆ ಪಾವತಿಸಲಿದೆ. ಒಟ್ಟಾರೆ 300 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸರ್ಕಾರವೇ ಭರಿಸಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪಾಸ್ ವಿತರಣೆ ಮಾಡುತ್ತಿದೆ.

ಸರ್ಕಾರದ ಈ ವಿದ್ಯಾರ್ಥಿ ಸ್ನೇಹಿ ನಿರ್ಧಾರದಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ದೊರೆಯಲಿದ್ದು, ಪೋಷಕರ ಮೇಲಿನ ಆರ್ಥಿಕ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ.