ಬೆಂಗಳೂರು: ರಾಜಧಾನಿ ಬೆಂಗಳೂರಿನ ಫ್ರೀಡಂಪಾರ್ಕ್ (Freedom Park) ಆಶಾ ಕಾರ್ಯಕರ್ತೆಯರ ಆಕ್ರೋಶದ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನ ಚಳಿ, ಗಾಳಿ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಮಳೆಯೂ ಅಡ್ಡಿಯಾಯಿತು. ಆದ್ರೆ ಮಳೆ ಬಂದರೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತಾ ಪಟ್ಟು ಹಿಡಿದು ಹೋರಾಟ ಮುಂದುವರಿಸಿದ್ದಾರೆ.
ಒಂದೆಡೆ ಜೋರು ಮಳೆ, ಇಳೆಯಲ್ಲಾ ನೀರಾದ್ರೂ ಜಗ್ಗದ ಗುಲಾಬಿ ಸೇನೆ. ವರುಣನಿಗೆ ಸೆಡ್ಡು ಹೊಡೆದು ನಿಂತ ಆಶಾ ಕಾರ್ಯಕರ್ತೆಯರು. ಚಳಿ, ಬಿಸಿಲಿಗೆ ನಲುಗದ ನಾವು ಮಳೆಗೆ ಬಗ್ಗುವುದುಂಟೆ ಎಂದು ಸವಾಲೆಸೆದ ಮುಷ್ಕರವನ್ನ ಮುಂದುವರಿಸಿದರು.
ಒಂದೆಡೆ ಸರ್ಕಾರದ ಭರವಸೆ. ಮತ್ತೊಂದೆಡೆ ಆಶಾಗಳ ಹಠ. ಸುರಿಯುವ ಮಳೆಯನ್ನ ಲೆಕ್ಕಿಸದೇ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕಳೆದ 8 ದಿನಗಳಿಂದ 15 ಸಾವಿರ ರೂ. ಗೌರವಧನಕ್ಕೆ ಪಟ್ಟು ಹಿಡಿದು ಆಶಾ ಕಾರ್ಯಕರ್ತೆರು ಮುಷ್ಕರ ನಡೆಸಿದ್ದಾರೆ. ಮಳೆ ನೀರಿನಿಂದ ವೇದಿಕೆಯ ಪೆಂಡಲ್ ಕೂಡ ಸೋರಲಾರಂಭಿಸಿದೆ. ಹೀಗಾಗಿ ಟಾರ್ಪಲ್ ಹಿಡಿದು ಮಳೆಯಿಂದ ರಕ್ಷಣೆ ಪಡೆದರು. ಮಕ್ಕಳನ್ನೂ ಜೊತೆಯಲ್ಲಿ ಕರೆತಂದಿರುವ ಕಾರ್ಯಕರ್ತೆಯರು ಮಳೆಯಲ್ಲೇ ಪರದಾಡುವಂತಾಗಿದೆ. ಆರೋಗ್ಯ ಮತ್ತಷ್ಟು ಹದಗೆಟ್ಟರೂ ಪರವಾಗಿಲ್ಲ, ಈ ಬಾರಿ ಖಾಲಿ ಕೈಯಲ್ಲಿ ಮನೆಗೆ ವಾಪಸ್ ಹೋಗಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮುಖಂಡೆ ನಾಗಲಕ್ಷ್ಮಿ ಸೇರಿದಂತೆ ಕೆಲ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದಾರೆ. ಸಿಎಂ ಜೊತೆ ಮಾತುಕತೆ ನಡೆಸಿದರೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಧಿವೇಶನದ ಬಳಿಕ ಬೇಡಿಕೆ ಈಡೇರಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಎಷ್ಟು ಗೌರವಧನ ಹೆಚ್ಚಳ ಮಾಡ್ತಾರೆ, ಯಾವಾಗ ಜಾರಿಗೆ ತರುತ್ತಾರೆ ಅನ್ನೋದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಕೇವಲ ಮೌಖಿಕ ಭರವಸೆಗೆ ಒಪ್ಪಲ್ಲ, ಸರ್ಕಾರದಿಂದ ಲಿಖಿತ ಭರವಸೆ ಹಾಗೂ ಅಧಿಕೃತ ಆದೇಶ ಬಂದರಷ್ಟೇ ಪ್ರತಿಭಟನೆ ಕೈಬಿಡುತ್ತೇವೆ ಅಂತಾ ಆಶಾಗಳು ಪಟ್ಟು ಹಿಡಿದಿದ್ದಾರೆ.
ಇನ್ನು ಆಶಾಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಫ್ರೀಡಂಪಾರ್ಕ್ಗೆ ಭೇಟಿ ನೀಡಿದ ನಟಿ ರಮ್ಯಾ, ಪ್ರತಿಭಟನಾ ನಿರತ ಕಾರ್ಯಕರ್ತೆಯರ ಜೊತೆ ಮಾತನಾಡಿದ್ರು. ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದ್ರು. ನಮ್ಮ ರಾಜ್ಯದಲ್ಲಿ ಕೇವಲ 7 ಸಾವಿರ ರೂ. ಸಿಗುತ್ತಿದೆ. ಇದು ಬಹಳ ಕಡಿಮೆ. ಆಶಾಗಳು ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರ ಆದಷ್ಟು ಬೇಗ ಅವರ ಬೇಡಿಕೆ ಈಡೇರಿಸಲಿದೆ ಎಂಬ ನಂಬಿಕೆ ಇದೆ. ನಾನೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಒಟ್ನಲ್ಲಿ, ಎಂಟು ದಿನ ಕಳೆದು 9 ದಿನಕ್ಕೆ ಕಾಲಿಟ್ಟಿದ್ದರೂ ಆಶಾಗಳ ಹೋರಾಟಕ್ಕೆ ಅಂತ್ಯ ಸಿಗುವ ಲಕ್ಷಣ ಕಾಣುತ್ತಿಲ್ಲ. ಇಂದು ಸಿಎಂ ಡಿಕೆಶಿವಕುಮಾರ್ ಜಪಾನ್ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದಾರೆ. ಡಿಕೆಶಿ ಬಂದ ಬಳಿಕವಾದ್ರೂ ಬೇಡಿಕೆ ಈಡೇರುತ್ತಾ? ಆಶಾ ಕಾರ್ಯಕರ್ತೆಯರ ಹೋರಾಟ ಅಂತ್ಯವಾಗುತ್ತಾ? ಕಾದು ನೋಡಬೇಕಾಗಿದೆ.















