ಜನನ–ಮರಣ ನೋಂದಣಿ ತಡವಾದರೆ ಇನ್ನು ಕಠಿಣ ನಿಯಮ; ಅಕ್ಟೋಬರ್ 1ರಿಂದ ಜಾರಿ

ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ ಮಾಡಿಸುವ ಪ್ರಕ್ರಿಯೆ ಇನ್ನು ಮುಂದೆ ಮತ್ತಷ್ಟು ಕಠಿಣವಾಗಲಿದೆ. ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2026ರ ನೂತನ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.

ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.

ಹೊಸ ನಿಯಮದ ಪ್ರಕಾರ, ಜನನ ಅಥವಾ ಮರಣ ಸಂಭವಿಸಿ ಒಂದು ವರ್ಷ ಕಳೆದ ಬಳಿಕ, ಎರಡು ವರ್ಷ ಪೂರ್ಣಗೊಳ್ಳುವ ಮುನ್ನ ನೋಂದಣಿಗೆ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಅಧಿಕಾರ ಪಡೆದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಆದೇಶ ಅಗತ್ಯವಾಗಲಿದೆ.

ಅದೇ ರೀತಿ, ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಕ್ಕಿಂತ ಹೆಚ್ಚು ಕಾಲದ ಬಳಿಕ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಇನ್ನು ಮುಂದೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆಯುವುದು ಕಡ್ಡಾಯವಾಗಲಿದೆ.

ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ವಿವರಗಳ ನಿಖರತೆಯನ್ನು ಪರಿಶೀಲಿಸಿದ ಬಳಿಕ ಹಾಗೂ ನಿಗದಿತ ಶುಲ್ಕ ಪಾವತಿಸಿದ ನಂತರ ನೋಂದಣಿಗೆ ಅನುಮತಿ ನೀಡಲಿದ್ದಾರೆ.

1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಸೆಕ್ಷನ್ 13(3)ಕ್ಕೆ ತಿದ್ದುಪಡಿ ತರುವ ಮೂಲಕ ಈ ಬದಲಾವಣೆ ಮಾಡಲಾಗಿದೆ. ಜನನ ಮತ್ತು ಮರಣ ಘಟನೆಗಳನ್ನು ನಿಗದಿತ ಅವಧಿಯೊಳಗೆ ನೋಂದಾಯಿಸುವಂತೆ ಜನರನ್ನು ಉತ್ತೇಜಿಸುವುದು ತಿದ್ದುಪಡಿಯ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜನನ ಮತ್ತು ಮರಣ ನೋಂದಣಿ ಕಾನೂನುಬದ್ಧವಾಗಿ ಕಡ್ಡಾಯವಾಗಿದ್ದು, ಈ ಕಾಯ್ದೆಯಡಿ ನೀಡಲಾಗುವ ಪ್ರಮಾಣಪತ್ರಗಳು ವ್ಯಕ್ತಿಯ ಜನನ ಅಥವಾ ಮರಣವನ್ನು ದೃಢೀಕರಿಸುವ ಪ್ರಮುಖ ಕಾನೂನು ದಾಖಲೆಗಳಾಗಿವೆ.