udupixpress
Home Trending ಯಾವ ಬಿರುದು, ಸಮ್ಮಾನವನ್ನೂ ಬಯಸದೆ ಶೈಕ್ಷಣಿಕ ಕ್ರಾಂತಿ ಮಾಡ್ತಿದ್ದಾರೆ ಉಡುಪಿಯ ಡಾ. ಮಹಾಬಲೇಶ್ವರ ರಾವ್

ಯಾವ ಬಿರುದು, ಸಮ್ಮಾನವನ್ನೂ ಬಯಸದೆ ಶೈಕ್ಷಣಿಕ ಕ್ರಾಂತಿ ಮಾಡ್ತಿದ್ದಾರೆ ಉಡುಪಿಯ ಡಾ. ಮಹಾಬಲೇಶ್ವರ ರಾವ್

          ಟಿ.ದೇವಿದಾಸ್

ಐದು ಕೃತಿಗಳಿಗೆ ಐದು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರ (ಇದೊಂದು ದಾಖಲೆ. ಯಾರಿಗೂ ಹೀಗೆ ಕಳೆದ ಏಳೆಂಟು ವರ್ಷಗಳಲ್ಲಿ ಕಸಾಪದ ದತ್ತಿನಿಧಿ ಬಹುಮಾನ ಬಂದಿಲ್ಲ), ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟಿನ ಜೀವಮಾನ ಸಾಧನೆ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ,

ಡಾ.ಹಿರೇಮಲ್ಲೂರು ಈಶ್ವರನ್ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉಪಾಧ್ಯಾಯ ಸಮ್ಮಾನ್ ಗೌರವ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಹಾ.ಮಾ.ನಾ. ದತ್ತಿನಿಧಿ ಪುರಸ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪುಸ್ತಕ ಸೊಗಸು ಬಹುಮಾನ, ಗೊರೂರು ಸಾಹಿತ್ಯ ಪುರಸ್ಕಾರ, ಅಂತಾರಾಷ್ಟ್ರೀಯ ರೋಟರಿ ವೃತ್ತಿಶ್ರೇಷ್ಠತಾ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ಪ್ರಶಸ್ತಿ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ, 140ಕ್ಕೂ ಹೆಚ್ಚು ಪುಸ್ತಕಗಳನ್ನು (ಸ್ವತಂತ್ರ ಹಾಗೂ ಅನುವಾದ) ಬರೆದ, ಹೈಸ್ಕೂಲ್ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಟಿಸಿಎಚ್ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ, ಓದುವ ಆಟ ಪಠ್ಯಪುಸ್ತಕ ಮರುನಿಗದಿ ಸಮಿತಿ ಸದಸ್ಯ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನವಸಾಕ್ಷರ ಸಾಹಿತ್ಯ ಮಾಲೆಯ ಸಂಪಾದನ ಸಮಿತಿ ಸದಸ್ಯ, ಕೇರಳ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಕನ್ನಡ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಸದಸ್ಯ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಭಾಷಾ ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ,

ಸೋಲಿಗ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಡಿಪಿಇಪಿ ಪಠ್ಯಪುಸ್ತಕ ರಚನೆ, ಪ್ರಾದೇಶಿಕ ಶಿಕ್ಷಣ ಕಾಲೇಜು,‌ ಮೈಸೂರು ಆಯೋಜಿಸಿದ ಧ್ವನಿಸುರುಳಿ ನಿರ್ಮಾಣ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ, ಮೈಸೂರು ಭಾರತೀಯ ಭಾಷಾ ಸಂಸ್ಥಾನವು ಭಾಷಾ ಪಠ್ಯಕ್ರಮ ಹಾಗೂ ಪಠ್ಯಪುಸ್ತಕ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಕಲಿಕೆಯ ಕನಿಷ್ಠ ಮಟ್ಟಗಳು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ, ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ರಚನಾಕಾರರ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸದಸ್ಯ, ಮಂಗಳೂರು ವಿವಿಯ ಎಕೆಡಮಿಕ್ ಕೌನ್ಸಿಲ್ ಸದಸ್ಯ, ಸಂಲಗ್ನತೆ ಸಮಿತಿ ಅಧ್ಯಕ್ಷ, ಸಮನ್ವಯ ಸಮಿತಿ ಅಧ್ಯಕ್ಷ, ಪರೀಕ್ಷಕ ಸಮಿತಿಯ ಅಧ್ಯಕ್ಷ, ಹಂಪಿ ಕನ್ನಡ ವಿವಿ ದೂರಶಿಕ್ಷಣ ವ್ಯಾಸಂಗ ಮಂಡಳಿಯ ಸದಸ್ಯ, ಯುಜಿಸಿ ಆಯೋಜಿಸುವ ಪುನಶ್ಚೇತನ ಹಾಗೂ ಪುನರ್ಮನನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ, ಪಿಎಚ್ ಡಿ‌, ಎಂಫಿಲ್ ಪದವೀಧರರಿಗೆ ಮಾರ್ಗದರ್ಶನ,

74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಸ್ಮರಣ ಗ್ರಂಥ ಕಡೆಗೋಲು ಸಂಪಾದನೆ, ಪ್ರಜಾವಾಣಿ, ಉದಯವಾಣಿ, ಜನವಾಹಿನಿ, ರುಜುವಾತು, ತರಂಗ, ರೂಪತಾರಾ, ಶೂದ್ರ, ಸಂಕ್ರಮಣ, ಹೊಸತು, ಸಂಗಾತ, ಸಮಾಜಮುಖಿ, ಹೊಸ ಮನುಷ್ಯ ಪತ್ರಿಕೆಗಳಲ್ಲಿ ವೈಚಾರಿಕ ವಸ್ತುನಿಷ್ಠ ಲೇಖನಗಳನ್ನು ಬರೆದ, Of Course ಈಗಲೂ ಬರೆಯುತ್ತಿರುವ ಉಡುಪಿಯವರೇ ಆದ ಡಾ. ಮಹಾಬಲೇಶ್ವರ ರಾವ್ ಅಪರೂಪದ ಶಿಕ್ಷಣವೇತ್ತರೆಂದೇ ಜನಮಾನ್ಯರಾದವರು. ಯಾಕೆಂದರೆ ಶಿಕ್ಷಣದಲ್ಲಿ ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ನಾಕು ದಶಕಗಳಿಂದ ರಚನಾತ್ಮಕ ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ. ಇಷ್ಟಾದರೂ ಅವರ ಶ್ರಮಸಂಸ್ಕೃತಿಗೆ, ಸಾಧನೆಗೆ, ಶಿಕ್ಷಣ ಸೇವೆಗೆ ಸಂದಬೇಕಾದ ಗೌರವ ಸಲ್ಲಲಿಲ್ಲವೆಂಬುದು ಪ್ರಶಸ್ತಿಗಳ ಪಟ್ಟಿಯನ್ನು ಅವಲೋಕಿಸಿದರೆ ಸ್ಪಷ್ಟವಾಗುತ್ತದೆ. ಇದು ಅತ್ಯಂತ ವಿಷಾದದ ಸಂಗತಿ.

ಡಾ. ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪ್ರಭುತ್ವವಿರುವವರು. ವಿಷಯವಸ್ತು ನಿರೂಪಣೆ ಮತ್ತು ವೈಚಾರಿಕ ಧೋರಣೆಯಲ್ಲಿ ನೇರ, ನಿಷ್ಠುರ ಸ್ವಭಾವದವರು. ಅಷ್ಟೇ ಭಾವುಕರು ಕೂಡ. ಡಾ. ರಾವ್ ಅವರ ಬೋಧನಾ ಶೈಲಿಯ ಬಗ್ಗೆ ಇಲ್ಲಿ ಹೇಳಲೇಬೇಕು. ಕನ್ನಡವನ್ನು ಒಂದು ಮೆಥೆಡ್ಡಾಗಿ ಆಯ್ಕೆ ಮಾಡಿಕೊಂಡಿರದವರು ರಾವ್ ಅವರ ಕನ್ನಡ ಕ್ಲಾಸಿಗೆ ಬಂದು ಕುಳಿತಿರುವುದನ್ನು ನಾನು ನೋಡಿದ್ದೇನೆ. ರಾವ್ ಅವರ ವಿಷಯ ಪ್ರವೇಶಿಕೆಯೇ ತುಂಬಾ ಸೊಗಸಾಗಿರುತ್ತದೆ. ತಾನೇನು ಬೋಧಿಸುತ್ತೇನೆಂಬುದನ್ನು ತರಗತಿ ಆರಂಭವಾಗಿ ಐದು-ಹತ್ತು ನಿಮಿಷಗಳಲ್ಲಿಯೇ ವಿದ್ಯಾರ್ಥಿಗಳಲ್ಲಿ ಸ್ವತಃ ಅರಿವನ್ನು ಮೂಡಿಸುವಂತೆ ಮಾಡುವ ಅವರ ಶೈಲಿಯೇ ಈಗಲೂ ನನಗೆ ರೋಚಕವೆನಿಸುತ್ತದೆ. ಅವರ ಗದ್ಯಬೋಧನೆ ಯಾವತ್ತೂ ನೆನಪಿನಲ್ಲಿರುವಂಥದ್ದು.

ಪ್ರತಿ ತರಗತಿಯನ್ನು ಡೀಲ್ ಮಾಡುವ ಅವರ ಒಟ್ಟೂ ನಡೆಯೇ ಸೋಜಿಗ ಮತ್ತು ಅನುಕರಣೀಯ, ಅನುಸರಣೀಯ. ಡಾ.ರಾವ್ ಅವರ ಮಾತು ಎಷ್ಟು ಸುಲಲಿತವೋ, ಅಷ್ಟೇ ಅವರ ಗದ್ಯ, ಪದ್ಯವಾಚನವೂ ಕೂಡ. ಮಾಧುರ್ಯಂ ಅಕ್ಷರಾನ್ವೇತ್ತಿ ಪದಚ್ಛೇದತೆ/ಸುಸ್ವರ ಧೈರ್ಯಂ ಲಯ ಸಮಸ್ತಂಚ ಷಡೇತೇಪಾಠಕಾಃ- ಅಕ್ಷರಗಳನ್ನು ನುಂಗದೆ ಸ್ಫುಟವಾಗಿ ಮಾಧುರ್ಯವಾಗಿ ಓದುವುದು, ಸರಿಯಾದ ಸ್ಥಳದಲ್ಲೇ ಪದವಿಂಗಡನೆ, ಇಂಪಾದ ಕಂಠ, ಧೈರ್ಯ, ಲಯಬದ್ಧತೆ- ಒಳ್ಳೆಯ ಓದುಗನ ಲಕ್ಷಣ. ಇವು ಡಾ.ರಾವ್ ಅವರಲ್ಲಿತ್ತು. ತಾಸಿನ ಅವಧಿಯ ತರಗತಿಯಲ್ಲಿ ಉತ್ಸಾಹದಿಂದಲೇ ಪಾಠಮಾಡುವ ಡಾ.ರಾವ್ ಅವರ ಲವಲವಿಕೆ ಮತ್ತು ಚೈತನ್ಯ ನಿವೃತ್ತರಾಗಿ ಐದಾರು ವರ್ಷ ಕಳೆದರೂ ಈಗಲೂ ಕಡಿಮೆಯಾಗಿಲ್ಲ. ಶೈಕ್ಷಣಿಕ ಆಡಳಿತದಲ್ಲೂ ಡಾ.ರಾವ್ ಅತ್ಯುತ್ತಮ ಪರಿಣಿತಿಯುಳ್ಳವರು. ಸೈ ಎನ್ನಿಸಿಕೊಂಡವರು.

ಅನುಗಮನ ಮತ್ತು ನಿಗಮನ ಪದ್ಧತಿಯೆರಡನ್ನೂ ಒಳಗೊಂಡ ಸಂಪೂರ್ಣ ಪದ್ದತಿಯನ್ನು ಸ್ವತಃ ಅಳವಡಿಸಿಕೊಂಡ ಡಾ.ರಾವ್ ಅದನ್ನು ತರಗತಿಯಲ್ಲಿ ಸೊಗಸಾಗಿ ಸಾದರಪಡಿಸುತ್ತಾ ಅಳವಡಿಸಿಕೊಳ್ಳಬೇಕಾದ ಬಗೆಯನ್ನು ಪ್ರತಿ ವಿದ್ಯಾರ್ಥಿಗೂ ಅರಿಕೆ ಮಾಡಿಸುತ್ತಾರೆ. ಕೇವಲ ಬೋಧನೆಯನ್ನು ಮಾತ್ರ ಮಾಡಿ ಕಳಚಿಕೊಳ್ಳುವ ಸ್ವಭಾವವಲ್ಲದ ಡಾ.ರಾವ್ ವಿದ್ಯಾರ್ಥಿಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಸುವ ಕೌಶಲವನ್ನು ಬೆಳೆಸುತ್ತಾರೆ. ಆ ವಿಷಯ ಈ ವಿಷಯ ಅಂತಿಲ್ಲ, ಯಾವುದೇ ವಿಷಯದಲ್ಲೂ ವಿದ್ಯಾರ್ಥಿಗಳನ್ನು ಚೆನ್ನಾಗಿ ತರಬೇತುಗೊಳಿಸುವ, ಮಾರ್ಗದರ್ಶನ ಮಾಡುವ ಸಾಮರ್ಥ್ಯ, ಶಕ್ತಿ ಅವರಲ್ಲಿದೆ. ಕ್ರಿಕೆಟ್ ಬಗ್ಗೆ ಆಸಕ್ತಿಯಿರುವ ಅವರು ಕ್ರಿಕೆಟ್ ಆಡುವುದು ಹೇಗೆಂಬುದನ್ನು ಚೆನ್ನಾಗಿ ವಿಶ್ಲೇಷಿಸಬಲ್ಲರು. ಅಂತೆಯೇ ವಾಲಿಬಾಲನ್ನೂ ಕೂಡ.

ಪರಿಸರ ಸಂರಕ್ಷಣೆಯ ಬಗ್ಗೆ ಎಷ್ಟು ಆಸಕ್ತಿಯಿದೆಯೋ ಅಷ್ಟೇ ಪ್ರಮಾಣದಲ್ಲಿ ರಾಜಕೀಯದಲ್ಲೂ ಆಸಕ್ತಿಯಿದೆ. ಆದರೆ ಯಾವ ಸಂದರ್ಭದಲ್ಲೂ ರಾಜಕೀಯ ಲಾಭಿಯನ್ನು ಅವರು ಒಪ್ಪಲಾರರು. ಮುಖ್ಯವಾಗಿ ಶಿಕ್ಷಣ ಅವರ ನೆಚ್ಚಿನ ಕ್ಷೇತ್ರವಾದ್ದರಿಂದ ಅವರ ಒಟ್ಟೂ ಬದುಕಿನಲ್ಲಿ ಕಾಣುವುದು ಶಿಕ್ಷಣ ಕುರಿತಾದ ಸೂಕ್ಷ್ಮ ಒಳನೋಟದ ಅವರ ಚಿಂತನೆಗಳೇ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಅವರ ಮನೋಧರ್ಮ ಶ್ಲಾಘನೀಯ. ಅವರ ಸಂಪರ್ಕಕ್ಕೆ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಅವರು ತಮ್ಮ ಜ್ಞಾನವನ್ನು ಸಾಧ್ಯವಾದಷ್ಟೂ ಹಂಚುತ್ತಾರೆ. ಕನ್ನಡ, ಮತ್ತು ಇಂಗ್ಲಿಷ್ ವ್ಯಾಕರಣದ ಸೂಕ್ಷ್ಮತೆಗಳ ಬಗ್ಗೆ ಯಾವಾಗಲೂ ನಾನವರಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿರುತ್ತೇನೆ. ಪ್ರಶ್ನೆಗಳನ್ನು ಕೇಳುತ್ತಿರುತ್ತೇನೆ. ಎಂದಿಗೂ ಅವರು ನನಗೆ ಉದಾಸೀನದಿಂದ ಪ್ರತಿಕ್ರಿಯಿಸಿದ್ದೇ ಇಲ್ಲ. ತಡರಾತ್ರೆಯಾದರೂ ಉತ್ತರ ಬರೆದು ಮರುದಿನ ಅಂಚೆಯಲ್ಲಿ ಕಳಿಸುತ್ತಾರೆ. ನನ್ನ ಭಾಷೆ, ಭಾವ ಮತ್ತು ಬರೆಹ ಅವರಿಂದ ಪ್ರಭಾವಗೊಂಡಿದೆಯೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ.‌

ಪುಸ್ತಕ ಪ್ರೀತಿ ಡಾ. ರಾವ್ ಅವರಲ್ಲಿ ಗಾಢವಾಗಿದೆ. ಯಾವ ಪುಸ್ತಕವಾದರೂ ಸರಿ, ಓದಿ ಅವರೆದುರಿಗೆ ಮಾತನಾಡಬೇಕಿತ್ತು. ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸುವ ಅವರು, ಸಣ್ಣದಾದ ಸ್ವಂತ ಲೈಬ್ರರಿಯನ್ನು ಇಟ್ಟುಕೊಳ್ಳುವಂತೆ ಹೇಳುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಶ್ರಮ ಮತ್ತು ಗೌರವ ಪ್ರಜ್ಞೆಯನ್ನು ಬೆಳೆಯಿಸುವ ಚಟುವಟಿಕೆಗಳನ್ನು ತರಗತಿಯಲ್ಲಿ ಹಮ್ಮಿಕೊಳ್ಳುತ್ತಿದ್ದರು. ಜಿ. ಕೃಷ್ಣಮೂರ್ತಿಯವರ ಶಿಕ್ಷಣ ಚಿಂತನೆಗಳ ಪ್ರಭಾವದಿಂದ ಡಾ.ರಾವ್ ಪ್ರಭಾವಿತಗೊಂಡವರು. ಜಿ.ಕೆ. ಅವರ Commentories on Living ಅನ್ನು ಮೂರು ಸಂಪುಟದಲ್ಲಿ ಬಾಳಿಗೊಂದು ಭಾಷ್ಯ ಎಂದು ಅನುವಾದಿಸಿದ್ದಾರೆ.

ಕನ್ನಡ ಅನುವಾದ ಸಾಹಿತ್ಯಕ್ಕೆ ಡಾ.ರಾವ್ ಕೊಡುಗೆ ಬಹುದೊಡ್ಡದು. 35 ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಜೆ.ಪಿ.ನಾಯ್ಕರ ಅನುವಾದ ಎರಡು, ಜಿಡ್ದು ಕೃಷ್ಣಮೂರ್ತಿ ವಿಚಾರಧಾರೆ ಅನುವಾದ ಒಟ್ಟು ೧೨ ಕೃತಿಗಳು. ೨೫೦೦ ಪುಟಗಳಷ್ಟು ಜಿಕೆ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟಿರುವ ಏಕೈಕ ಅನುವಾದಕ ಅಂತ ಯಾರಾದರೂ ಇದ್ದರೆ ಅದು ಡಾ.ರಾವ್ ಮಾತ್ರ. ಹಾಗೆ ನೋಡಿದರೆ ಓ.ಎಲ್.ನಾಗಭೂಷಣ ಅವರಿಗಿಂತ ಹೆಚ್ಚು ಅನುವಾದ ಕಾರ್ಯ ಡಾ.ರಾವ್ ಅವರಿಂದ ಆಗಿದೆ. ಎಚ್.ಡಿ.ಸಾಂಕಾಲಿಯಾ, ಪ್ರಕಾಶ್ ಕಾರಟ್, ಅಬ್ರಹಾಂ ಕೋವೂರ್, ಸ್ವಾಮಿ ರಂಗನಾಥಾನಂದಜೀ, ಡಾ.ಬಿ.ಎಂ.ಹೆಗ್ಡೆ, ಮಧುಕಿಶ್ವರ್, ಪ್ರೊ.ಅಮ್ರಿಕ್ ಸಿಂಗ್, ನೆಹರೂ ಅವರ ಪ್ರಿಯ ಇಂದಿರಾ, ಎ.ಕೆ.ರಾಮಾನುಜನ್, ಎಸ್.ದಂಡಪಾಣಿ, ಡಾ.ರಾಧಾಕೃಷ್ಣನ್ನರ ವಿಚಾರಧಾರೆಗಳನ್ನು ಒಳಗೊಂಡ ಜ್ಞಾನಮ್ ವಿಜ್ಞಾನ ಸಹಿತಮ್, ವಿ.ಎಂ.ಮೋಹನ್ ರಾಜ್, ಡಾ.ಬೋಳ ವಿಠಲ ಶೆಟ್ಟಿ, ಪಾಲೊ ಫ್ರೆಯರೆ, ಡಾ.ವಸಂತ ಮಾಧವ, ಪ್ತಕಾಶ ಅಯ್ಯರ್, ಮಾರ್ಕ್ ಲೀ ಮುಂತಾದವರ ಪುಸ್ತಕಗಳನ್ನು ಕನ್ನಡಕ್ಕನುವಾದಿಸಿದ ಹೆಗ್ಗಳಿಕೆ ಡಾ ರಾವ್ ಅವರದ್ದು.

ಡಾ.ರಾವ್ ಅವರು ಸಂಗೀತ, ಕಲೆ, ಯಕ್ಷಗಾನ, ಭರತನಾಟ್ಯಗಳಲ್ಲಿ ಆಸಕ್ತಿ, ಅಭಿರುಚಿಯಿರುವವರು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಗುಣಗ್ರಾಹಿತ್ವ ಅವರಲ್ಲಿದೆ. ವಿದ್ಯಾರ್ಥಿಗಳ ಬರೆಹಗಳನ್ನು ತಿದ್ದುವ ಅವರು ಯಾವ ಬರೆಹವನ್ನೂ ತಿರಸ್ಕರಿಸುವುದಿಲ್ಲ. ತನ್ನಿಂದ ನ್ಯಾಯಕೊಡಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ನೀವು ಇಂಥವರನ್ನು ಭೇಟಿಯಾಗಿ ಎಂದು ಯೋಗ್ಯ ವ್ಯಕ್ತಿಗಳನ್ನು ಸೂಚಿಸುವ ಔದಾರ್ಯವುಳ್ಳವರು. ವೃತ್ತಿ ಮತ್ಸರವಿಲ್ಲದ, ಎಲ್ಲರನ್ನೂ ಗೌರವಿಸುವ ಗುಣಸ್ವಭಾವದ ಡಾ. ರಾವ್ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಅವರ ನಿಜಕಾಳಜಿ ಪ್ರಚುರವಾಗುತ್ತಲೇ ಇರುತ್ತದೆ.

ಇತ್ತೀಚೆಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಮಾಡುವ ವಿಚಾರ ಬಂದಾಗ, ಡಾ.ರಾವ್ ಪ್ರತಿಕ್ರಿಯಿಸಿದ್ದು ಹೀಗೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಮಾಡುವುದು ಸೂಕ್ತವಲ್ಲ. ಸಹಜಸ್ಥಿತಿ ಮೂಡುವವರೆಗೆ ಮುಂದೂಡುವುದು ಉಚಿತ. ಮುಖ್ಯ ಪರೀಕ್ಷೆಗಳನ್ನು ರದ್ದು ಮಾಡಿ ಎಲ್ಲರೂ ಉತ್ತೀರ್ಣರು ಎಂದು ಘೋಷಿಸುವುದಾಗಲಿ, ಮುಂದಿನ ತರಗತಿಗಳಿಗೆ ದಬ್ಬುವುದಾಗಲಿ ಮುಂದೆ ಕೆಲವು ಆಡಳಿತಾತ್ಮಕ ಸಮಸ್ಯೆಗಳಿಗೆ ಹಾದಿ ಮಾಡಿಕೊಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ತರಗತಿ ಪರೀಕ್ಷೆಗಳನ್ನು ರದ್ದು ಮಾಡುವ ಶಿಫಾರಸು ಮಾಡಿದ್ದರೂ ಮುಖ್ಯ ಪರೀಕ್ಷೆಗಳನ್ನು ಸೂಕ್ತ ಸಂದರ್ಭ ನಡೆಸಲು ಒಲವು ತೋರಿಸಿದೆ. ಶೈಕ್ಷಣಿಕ ವರ್ಷವನ್ನು ಎರಡು-ಮೂರು ತಿಂಗಳು ಮುಂದೂಡಿದರೂ ಆಕಾಶ ತಲೆಯ ಮೇಲೆ ಉದುರುವುದಿಲ್ಲ. ಓರ್ವ ಸಾಮಾನ್ಯ ಪ್ರಜೆಯಾಗಿ ಇದು ನನ್ನ ಪ್ರಾಮಾಣಿಕ ಅನಿಸಿಕೆ.

ಡಾ.ರಾವ್, ಮಾತಾಡಿ ಯೋಚಿಸುವವರಲ್ಲ, ಯೋಚಿಸಿ ಮಾತನಾಡುವವರು. ಪೂರ್ವ ಸಿದ್ಧತೆಯಿಲ್ಲದೆ ತರಗತಿಗೆ ಬರುವವರಲ್ಲ, ವೇದಿಕೆಯನ್ನು ಏರುವವರಲ್ಲ. ಮೌಲ್ಯ ಶಿಕ್ಷಣದ ಬಗ್ಗೆ ಕಾಳಜಿಯಿರುವ ರಾವ್ ತಮ್ಮ ಪ್ರತಿ ಮಾತು ಕೃತಿಯಲ್ಲಿ ಅದನ್ನು ಉಳಿಸಿಕೊಂಡವರು. ಶಿಕ್ಷಣದ ಕುರಿತಾಗಿ ಯಾವ ನೆಲೆಯ ವೈಚಾರಿಕ ನಿಲುವನ್ನೂ ಸ್ವೀಕರಿಸುವ ಅವರು ವಿದ್ಯಾರ್ಥಿಗಳ ಮನಸಿನಲ್ಲಿ ಯಾವತ್ತೂ ಜೀವನ ಮೌಲ್ಯಗಳನ್ನು ಕಲಿಸಿದ ಅಧ್ಯಾಪಕರಾಗಿ ಇರುವವರು. ಭೂತವನ್ನು ಮರೆಯದೆ, ವರ್ತಮಾನಕ್ಕೆ ಸ್ಪಂದಿಸುತ್ತ ಭವಿಷ್ಯತ್ತಿನ ಚಿಂತನೆ ಮಾಡುವ ಒಬ್ಬ ಅಧ್ಯಾಪಕ ತನ್ನ ಪ್ರಜ್ಞೆಯ ಶಕ್ತಿಯ ಮೂಲಕ ತನ್ನ ವಿದ್ಯಾರ್ಥಿಗಳ ಮುಖಾಂತರ ಬದುಕಿರುತ್ತಾನೆಂದು ನಾನು ನಂಬಿದವನು. ಅಂಥ ಅಪೂರ್ವ ಅಧ್ಯಾಪಕರಲ್ಲಿ ಡಾ.ರಾವ್ ಒಬ್ಬರು. ಅಂತೆಯೇ ಅಪರೂಪದ ಶಿಕ್ಷಣವೇತ್ತ ಕೂಡ.

( ಲೇಖಕ ಟಿ.ದೇವಿದಾಸ್ ಶಿಕ್ಷಕರು, ವೈಚಾರಿಕ ಬರಹಗಾರರು)