ಬೆಂಗಳೂರು: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹೊಸ ವರ್ಷಾಚರಣೆಗೆ ಕೆಲವೊಂದು ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಡಿ.ಜೆ ಬಳಕೆ ಮತ್ತು ಬಹಿರಂಗ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಡಿಸೆಂಬರ್ 30ರಿಂದ ಜನವರಿ 2ರವರೆಗೂ ರಾಜ್ಯದಾದ್ಯಂತ ನಿರ್ಬಂಧ ಹೇರಲಾಗಿದ್ದು, ಈ ಅವಧಿಯಲ್ಲಿ ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ ಎಂದರು.
ಬಾರ್, ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ ಒಟ್ಟು ಸಾಮರ್ಥ್ಯದ ಶೇ. 50ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಬೇಕು. ಅಲ್ಲಿನ ಎಲ್ಲ ಸಿಬ್ಬಂದಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ ಎಂದು ತಿಳಿಸಿದರು.
ಕ್ರಿಸ್ ಮಸ್ ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಚರ್ಚ್ ಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡೇ ಪ್ರಾರ್ಥನೆ ಸಲ್ಲಿಸುವ ವ್ಯವಸ್ಥೆ ಈಗಾಗಲೇ ಇದೆ. ಅದು ಮುಂದುವರಿಯುತ್ತದೆ ಎಂದರು.