ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ; ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಕೇರಳ, ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹಾಗೂ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದೀಗ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಮಾರ್ಗಸೂಚಿಯಲ್ಲಿ ಏನಿದೆ..?

ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ.

ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲ್ಬುರ್ಗಿ ಮತ್ತು ಕೇರಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಶುಕ್ರವಾರ ರಾತ್ರಿ 9 ರಿಂದ ವೀಕೆಂಡ್ ಕರ್ಫ್ಯೂ ಆರಂಭವಾಗಲಿದ್ದು, ಸೋಮವಾರ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರಲಿದೆ.

ವೀಕೆಂಡ್ ಕರ್ಫ್ಯೂ ಇರುವ ಜಿಲ್ಲೆಗಳಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಅಂಗಡಿಗಳನ್ನು ಓಪನ್ ಮಾಡಲು ಅವಕಾಶವಿದೆ.

ಬಾರ್​ಗಳಲ್ಲಿ ಮದ್ಯ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮದ್ಯದಂಗಡಿ ಓಪನ್ ಮಾಡಬಹುದು.

ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್ ಮಾತ್ರ ನೀಡಬಹುದು. ಹೋಮ್ ಡೆಲಿವರಿಗೆ 24 ಗಂಟೆಯೂ ಅವಕಾಶವಿದೆ.

ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಮದುವೆ ಸಮಾರಂಭಗಳಿಗೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅಂತ್ಯಕ್ರಿಯೆಯಲ್ಲಿ ಗರಿಷ್ಠ 20 ಜನರಿಗೆ ಮಾತ್ರ ಭಾಗವಹಿಸಲು ಅನುಮತಿ ಇದೆ.

ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿಯೊಂದಿಗೆ ದೇಗುಲ ಪ್ರವೇಶಕ್ಕೆ ಅವಕಾಶವಿದೆ.

ಜಾತ್ರೆ, ಮೆರವಣಿಗೆ, ಹಬ್ಬಗಳಿಗೆ ಅವಕಾಶವಿಲ್ಲ.