ಬೆಂಗಳೂರು: ರಾಜ್ಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಸಂಚಾರಿ ಪೊಲೀಸ್ ಇನ್ನು ಮುಂದೆ ಪೆನ್ನು-ಪೇಪರು ಹಿಡಿದು ದಂಡ ವಿಧಿಸುವ ಬದಲಿಗೆ ಹೈಟೆಕ್ ದಂಡ ಪಾವತಿಯನ್ನು ಅಳವಡಿಸ್ಕೊಂಡಿದೆ.
ಹೈಟೆಕ್ ದಂಡ ಪಾವತಿ ಬಗ್ಗೆ ಕರ್ನಾಟಕ ಟ್ರಾಫಿಕ್ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲೆಡೆ ಇನ್ಮುಂದೆ ಇ-ಚಲನ್ ಮೂಲಕ ದಂಡ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ.
ರಾಜ್ಯದಲ್ಲಿ ಶೇ.100 ರಷ್ಟು ಪೇಪರ್ಲೆಸ್ ದಂಡ ಪಾವತಿ ವ್ಯವಸ್ಥೆ ಜಾರಿಯಾಗಿದೆ. ದೇಶದಲ್ಲೆ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಸಂಚಾರ ನಿರ್ವಹಣೆಯಲ್ಲಿ ಪಾರದರ್ಶಕತೆ ಬರಲಿದೆ.
ರಾಜ್ಯ ಪೊಲೀಸ್ ಇಲಾಖೆ ಎಸ್ಬಿಐ ಜತೆ ಸಹಯೋಗ ಮಾಡಿಕೊಂಡಿದ್ದು, ಸಾರ್ವಜನಿಕರು ಕಟ್ಟುವ ದಂಡ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ ಮಧ್ಯದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಪ್ರತೀ ರೂಪಾಯಿಗೂ ಲೆಕ್ಕ ಇರುತ್ತದೆ. ಜನರು ಕಟ್ಟಿದ ದಂಡ ನೇರ ಇಲಾಖೆಯ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ದಂಡ ವಿಧಿಸಲ್ಪಟ್ಟವರು ಯುಪಿಐ, ಡೆಬಿಟ್ ಕಾರ್ಡ್ ಅಥವಾ ನಗದಿನ ಮೂಲಕ ದಂಡ ಕಟ್ಟಬಹುದಾಗಿದೆ.
ಒಟ್ಟು 722 ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು, 64 ಸಂಚಾರ ಠಾಣೆಗಳ ಸಿಬ್ಬಂದಿಗೆ 1,766 ಇ-ಚಲನ್ ಯಂತ್ರ ನೀಡಲಾಗಿದೆ.