ಉಡುಪಿ: ಬೆಳ್ಮಣ್ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ವಿತರಣೆಯಾದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಗ್ರಾಮದ ಗ್ರಾಹಕರು ಮನೆಗೆ ಪಡಿತರ ತೆಗೆದುಕೊಂಡು ಹೋದ ಅಕ್ಕಿಯನ್ನು ನೀರಿನಲ್ಲಿ ಹಾಕಿ ತೊಳೆಯುತ್ತಿದ್ದಾಗ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಕೂಡಲೇ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಆಹಾರ ಇಲಾಖೆ ಮೂಲಕ ವಿತರಣೆ ಆಗುವ ಅಕ್ಕಿ ಬಹಳಷ್ಟು ಸಲ ಕಲಬೆರಕೆಯಿಂದ ಕೂಡಿರುವುದು ರಾಜ್ಯದ ಅಲ್ಲಾಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೆಳ್ಮಣ್ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿತರಣೆಯಾಗಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿ ನೋಡಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
8 ದಿನಗಳ ಹಿಂದೆ ಒಂದಿಬ್ಬರು ಗ್ರಾಹಕರಿಗೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೀತಿ ಅಕ್ಕಿ ದೊರೆತಿದ್ದು, ಈ ಕುರಿತು ತಕ್ಷಣವೇ ಆಹಾರ ನಿರೀಕ್ಷಕರಿಗೆ ದೂರು ನೀಡಲಾಗಿದೆ. ಒಂದು
ಗೋಣಿಯಲ್ಲಿ ಇಂತಹ ಅಕ್ಕಿ ದೊರೆತಿದೆ. ಎಲ್ಲಿ ಕಲಬೆರಕೆಯಾಗಿದೆ ಮತ್ತು ಯಾರಿಂದ ಆಗಿದೆ ಎನ್ನುವುದು ತನಿಖೆಯಾಗಿ ಇದರಲ್ಲಿ ಶಾಮೀಲಾಗಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ಕಿ ಪಡೆದವರು ಪ್ಲಾಸ್ಟಿಕ್ ಅಕ್ಕಿ ಪತ್ತೆಯಾದರೆ ಕೂಡಲೇ ವಾಪಸ್ ನೀಡಬೇಕು ಎಂದಿದ್ದಾರೆ.
2013 ರಲ್ಲಿ ಸಿದ್ಧರಾಮಯ್ಯ ಸರಕಾರವಿದ್ದಾಗ ಹಸಿವು ಮುಕ್ತ ರಾಜ್ಯಕ್ಕೆ ಮಾದರಿಯಾಗಿತ್ತು. ಇಂದಿರಾ ಕ್ಯಾಂಟೀನ್ ಜೊತೆಗೆ ಉಚಿತ ಅಕ್ಕಿಯೊಂದಿಗೆ ತೊಗರಿ ಬೇಳೆ,ಅಡುಗೆ ಎಣ್ಣೆ,ಅಯೋಡಿನ್ ಉಪ್ಪು ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ಅನ್ನಕ್ಕೆ ಕನ್ನ ಹಾಕಿದ್ದು ಉಚಿತ ಅಕ್ಕಿ ಸರಬರಾಜು ನಿಲ್ಲಿಸಿ ಪಾವತಿಸಿ ಪಡೆಯುವ ಅಕ್ಕಿಯಲ್ಲೂ ಕಲಬೆರಕೆ ಮಾಡಿದ್ದು ಬಡ ಜನರ ಜೀವದ ಜೊತೆ ಸರಕಾರ ಚೆಲ್ಲಾಟ ಆಡುತ್ತಿದೆಯೇ ಎಂದು ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಪ್ರಶ್ನಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಯಲ್ಲೂ ಸರಕಾರದ ಕಲಬೆರಕೆ ಈಗ ಬಯಲಾಗಿದ್ದು ರಾಜ್ಯದ ಜನರ ಆರೋಗ್ಯದ ಕುರಿತು ಬೇಜವಬ್ದಾರಿ ಪ್ರದರ್ಶಿಸುವ ಬಿಜೆಪಿ ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.