ಹೊಸ ಗೈಡ್​​ಲೈನ್ಸ್​ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ: ಯಾವುದಕ್ಕೆಲ್ಲ ಅನುಮತಿ? ಯಾವುದಕ್ಕಿಲ್ಲ.?

ಬೆಂಗಳೂರು: ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ಮೇ 4ರವರೆಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಹಾಗೂ ಶನಿವಾರ ಭಾನುವಾರಗಳಂದು ಇಡೀ ದಿನ ಕರ್ಫ್ಯೂ ಜಾರಿ ಮಾಡಲಾಗಿದೆ.

ಅಗತ್ಯ ಸೇವೆ ಒದಗಿಸುವ ಕೆಲವು ಅಂಗಡಿ/ಸಂಸ್ಥೆಗಳಿಗೆ ಮಾತ್ರ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಆದ್ರೆ ಯಾವ ಅಂಗಡಿಗಳು ಓಪನ್ ಇರಲು ಅವಕಾಶ, ಯಾವುದೆಲ್ಲಾ ಬಂದ್ ಆಗಿರಬೇಕು ಎಂಬ ಬಗ್ಗೆ ಗೊಂದಲ ಮೂಡಿದ ಹಿನ್ನೆಲೆ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಸಂಬಂಧ ಹೊಸ ಗೈಡ್​​ಲೈನ್ಸ್​ ಹೊರಡಿಸಿದೆ.

ಯಾವೆಲ್ಲ ಅಂಗಡಿ ಒಪನ್ ಇರಲಿದೆ?:

ಪಡಿತರ ಅಂಗಡಿಗಳು ಸೇರಿದಂತೆ ಎಲ್ಲಾ ರೇಷನ್​​ ಅಂಗಡಿಗಳು, ಆಹಾರ, ದಿನಸಿ, ಹಣ್ಣು-ತರಕಾರಿ ಅಂಗಡಿಗಳು, ಡೈರಿ, ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪ್ರಾಣಿಗಳ ಮೇವು ಮಾರಾಟ ಮಾಡುವ ಅಂಗಡಿಗಳು ಓಪನ್ ಇರಲು ಅನುಮತಿ ಇದೆ.

ಹೋಲ್​ಸೇಲ್ ತರಕಾರಿ, ಹಣ್ಣು ಹಾಗೂ ಹೂವಿನ ಮಾರುಕಟ್ಟೆಗಳು ಹೊರಾಂಗಣ ಸ್ಥಳಗಳಲ್ಲಿ ಅಥವಾ ಮೈದಾನಗಳಲ್ಲಿ ಕೊರೊನಾ ನಿಯಮ ಪಾಲನೆ ಮಾಡಿಕೊಂಡು ಕಾರ್ಯನಿರ್ವಹಿಸಬಹುದು. ಮಾರುಕಟ್ಟೆಗಳ ಶಿಫ್ಟಿಂಗ್ ಪ್ರಕ್ರಿಯೆ ಏಪ್ರಿಲ್ 23ರೊಳಗೆ ಪೂರ್ಣಗೊಳ್ಳುತ್ತದೆ.

ರೆಸ್ಟೋರೆಂಟ್‌ಗಳು ಮತ್ತು ಉಪಹಾರಗೃಹಗಳಲ್ಲಿ ಪಾರ್ಸೆಲ್​ ತೆಗೆದುಕೊಂಡು ಹೋಗಲು ಮಾತ್ರ ಅನುಮತಿ

ಲಾಡ್ಜಿಂಗ್​​ ಹೋಟೆಲ್‌ಗಳಲ್ಲಿ ಅತಿಥಿಗಳಿಗೆ ಮಾತ್ರ ಸೇವೆ ನೀಡುವುದಕ್ಕೆ ಅನುಮತಿ

ಸ್ವತಂತ್ರ ಮದ್ಯದಂಗಡಿಗಳು, ಮಳಿಗೆಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಲಿಕ್ಕರ್
ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ಇದೆ.

ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅನುಮತಿ ಇದೆ.

ಬ್ಯಾಂಕುಗಳು, ಇನ್ಶುರೆನ್ಸ್​ ಕಚೇರಿಗಳು ಮತ್ತು ಎಟಿಎಂಗಳು ತೆರೆದಿರಲು ಅನುಮತಿಸಲಾಗಿದೆ.

ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಕಾರ್ಯನಿರ್ವಹಿಸಲು ಅನುಮತಿ ಇದೆ.

ಇ-ಕಾಮರ್ಸ್ ಮೂಲಕ ಎಲ್ಲಾ ವಸ್ತುಗಳ ಡೆಲಿವರಿಗೆ ಅನುಮತಿ ಇದೆ.

ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳು ಮತ್ತು ಸೆಕ್ಯುರಿಟೀಸ್ & ಎಕ್ಸ್​​ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ ನೋಟಿಫೈ ಆಗಿರುವ ಸೇವೆಗಳಿಗೆ ಅನುಮತಿಸಲಾಗಿದೆ.

ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳಿಗೆ ಅವಕಾಶ ಇದೆ.
ಅನುಮತಿಸಲಾಗಿದೆ.

ಖಾಸಗಿ ಭದ್ರತಾ ಸೇವೆಗಳನ್ನು ಅನುಮತಿಸಲಾಗಿದೆ.

ಸಲೂನ್ ಹಾಗೂ ಬ್ಯೂಟಿ ಪಾರ್ಲರ್‌ಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊರೊನಾ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಿ
ಕಾರ್ಯನಿರ್ವಹಿಸಲು ಅನುಮತಿ ಇದೆ.

ನಿರ್ಮಾಣ ಸಾಮಗ್ರಿ(ಕನ್ಸ್​ಟ್ರಕ್ಷನ್ ಮೆಟೀರಿಯಲ್ಸ್​) ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿರುವ ಅಂಗಡಿಗಳು ಮತ್ತು ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

ಯಾವುದಕ್ಕೆಲ್ಲ ಅನುಮತಿ ಇಲ್ಲ?
ಮೇಲೆ ತಿಳಿಸಲಾಗಿರುವ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ಅಥವಾ ಸಂಸ್ಥೆಗಳು ಕಾರ್ಯನಿರ್ವಹಿಸಲು ಅವಕಾಶ ಇಲ್ಲ. ಹಾಗೇ ಯಾವೆಲ್ಲಾ ಸಂಸ್ಥೆಗಳಲ್ಲಿ ಸಾಧ್ಯವೋ ಅಲ್ಲೆಲ್ಲಾ ಉದ್ಯೋಗಿಗಳಿಗೆ ವರ್ಕ್​ ಫ್ರಮ್ ಹೋಂಗೆ ಉತ್ತೇಜನ ನೀಡಬೇಕೆಂದು ಸರ್ಕಾರ ತಿಳಿಸಿದೆ.