ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಲಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಇನ್ನು ಮುಂದೆ ಅಯೋಧ್ಯೆಗೆ ಭೇಟಿ ನೀಡಲಿದ್ದು, ಎಲ್ಲಾ ರಾಜ್ಯಗಳೂ ಅತಿಥಿ ಗೃಹ ನಿರ್ಮಾಣ ಮಾಡುವತ್ತ ಚಿತ್ತ ಹರಿಸಿದೆ.
ಕರ್ನಾಟಕ ಸರ್ಕಾರವು ಕೂಡ ರಾಜ್ಯದ ರಾಮ ಭಕ್ತರಿಗೆ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿಗಳಿಗಾಗಿಯೇ ಅತಿಥಿ ಗೃಹ ನಿರ್ಮಾಣ ಮಾಡಲು ಮುಂದಾಗಿದೆ.
ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಅತಿಥಿ ಗೃಹ ನಿರ್ಮಿಸಲು ಅನುಮತಿ ನೀಡುವಂತೆ ರಾಜ್ಯದ ಮುಜರಾಯಿ ಇಲಾಖೆ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ. ಅಯೋಧ್ಯೆಯ ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಪ್ರದೇಶ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ. ಈ ಹಿಂದೆ 2020ರಲ್ಲೂ ಉತ್ತರಪ್ರದೇಶದ ಮುಖ್ಯಮಂತ್ರಿಗಳಿಗೆ ಯಡಿಯೂರಪ್ಪ ಪತ್ರ ಬರೆದು ಮನವಿ ಮಾಡಿದ್ದರು.
ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು, ರಾಮಭಕ್ತರುಅಯೋಧ್ಯೆಗೆ ಪ್ರಯಾಣಿಸಲಿದ್ದು ವಸತಿ, ಊಟದ ವ್ಯವಸ್ಥೆಗಾಗಿ ಮುಜರಾಯಿ ಇಲಾಖೆ ಅತಿಥಿ ಗೃಹ ನಿರ್ಮಾಣ ಮಾಡಲಿದೆ. 5 ಎಕರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣಕ್ಕೆ ಮನವಿ ಮಾಡಲು ಸಿದ್ಧವಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಉತ್ತರ ಪ್ರದೇಶದ ಸರ್ಕಾರದ ಹೌಸಿಂಗ್ ಬೋರ್ಡ್ ರಾಜ್ಯಕ್ಕೆ ಪ್ರತಿಕ್ರಿಯೆ ಪತ್ರ ಕಳುಹಿಸಿ ಒಪ್ಪಿಗೆ ಸೂಚಿಸಿದೆ. ಹಾಗಾಗಿ ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿ ನಡೆಸುತ್ತಿದೆ. ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಒಂದೆರಡು ವರ್ಷದಲ್ಲಿ ಅತಿಥಿ ಗೃಹ ನಿರ್ಮಾಣವಾಗಲಿದೆ.