ನವದೆಹಲಿ :ಅಮೆಜಾನ್ ಇಂಡಿಯಾ ಪ್ರತಿನಿಧಿಗಳು ಹಲವಾರು ಏಂಜೆಲ್ ಹೂಡಿಕೆದಾರರು ಮತ್ತು ವೆಂಚರ್ ಫಂಡ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸಹ ಪ್ರೈಮ್ ವಿಡಿಯೋ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಮೆಜಾನ್ ಪ್ರೈಮ್ ಸ್ಟಾರ್ಟಪ್ ಸರಣಿಯು ಶಾರ್ಕ್ ಟ್ಯಾಂಕ್ ಇಂಡಿಯಾ ಮಾದರಿಯಲ್ಲೇ ಇರಲಿದೆ.
ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಈಗಾಗಲೇ ಶಾರ್ಕ್ ಟ್ಯಾಂಕ್ ಇಂಡಿಯಾದ ಎರಡು ಸೀಸನ್‌ಗಳು ಪ್ರಸಾರವಾಗಿವೆ. ಸೋನಿ ಇಂಡಿಯಾದಲ್ಲಿನ ಶಾರ್ಕ್ ಟ್ಯಾಂಕ್ ಶೋ ಅಮೇರಿಕನ್ ಶಾರ್ಕ್ ಟ್ಯಾಂಕ್‌ನ ಶೋ ದ ಭಾರತೀಯ ಫ್ರ್ಯಾಂಚೈಸ್ ಆಗಿದೆ. ಉದ್ಯಮಿಗಳು ಸ್ಟಾರ್ಟಪ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಬಹುದಾ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ ಹೂಡಿಕೆದಾರರಿಗೆ ಅಗತ್ಯವಾದ ಪ್ರಸೆಂಟೇಶನ್ಗಳನ್ನು ತೋರಿಸುತ್ತದೆ. ಭಾರತದಲ್ಲಿ ಭರವಸೆಯ ಸ್ಟಾರ್ಟ್‌ಅಪ್‌ಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಅಮೆಜಾನ್ ಈ ವಾರದಿಂದ ತನ್ನ ಪ್ರೈಮ್ ಸ್ಟ್ರೀಮಿಂಗ್ ಸೇವೆಯಲ್ಲಿ ಶಾರ್ಕ್ ಟ್ಯಾಂಕ್ ಮಾದರಿಯ ಟಿವಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ವರದಿಗಳು ತಿಳಿಸಿವೆ.ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾಗುವ ಶಾರ್ಕ್ ಟ್ಯಾಂಕ್ ಶೋ ಮಾದರಿಯಲ್ಲೇ ಅಮೆಜಾನ್ ಪ್ರೈಮ್ ವಿಡಿಯೋ ಕೂಡ ಹೊಸ ಸರಣಿಯೊಂದನ್ನು ಆರಂಭಿಸಲಿದೆ
ಮುಂಬರುವ ವಾರಾಂತ್ಯದಲ್ಲಿ ಇ -ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಪ್ರೈಮ್ ಡೇಗೆ ಸಜ್ಜಾಗುತ್ತಿದ್ದಂತೆ, ಪ್ರೈಮ್ ವಿಡಿಯೋ ಶೋವನ್ನು ಬುಧವಾರದಿಂದಲೇ ಅನಾವರಣಗೊಳಿಸಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ವರದಿಯ ಪ್ರಕಾರ, ಪ್ರೈಮ್ ಸ್ಟಾರ್ಟ್‌ಅಪ್ ಸರಣಿಯು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿನ ಸ್ಟಾರ್ಟಪ್ಗಳ ಮಾದರಿಗಳನ್ನು ಪ್ರದರ್ಶಿಸಲಿದೆ. “ಅಮೆಜಾನ್ ತನ್ನ ಭಾರತ ಕೇಂದ್ರಿತ 250 ಮಿಲಿಯನ್ ಡಾಲರ್ ಎಸ್ಎಂ ಭಾವ್ (SMBhav) ನಿಧಿಯ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಫಂಡಿಂಗ್ ಮಾಡಲಿದೆ” ಎಂದು ವರದಿ ಉಲ್ಲೇಖಿಸಿದೆ. ಆದಾಗ್ಯೂ ಅಮೆಜಾನ್ ಇಂಡಿಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸ್ಟಾರ್ಟ್ಪ್ ಉದ್ಯಮ ಸಂಕಷ್ಟದಲ್ಲಿರುವಾಗ ಅಮೆಜಾನ್ ಸ್ಟಾರ್ಟ್ಪ್: ಭಾರತೀಯ ಸ್ಟಾರ್ಟಪ್ ಉದ್ಯಮವು ಸಂಕಷ್ಟದ ಸ್ಥಿತಿಯಲ್ಲಿರುವ ಈ ಸಮಯದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಸ್ಟಾರ್ಟಪ್ ವಲಯದಲ್ಲಿ ಶೋ ಒಂದನ್ನು ಆರಂಭಿಸುತ್ತಿರುವುದು ಗಮನಾರ್ಹವಾಗಿದೆ. ಭಾರತೀಯ ಸ್ಟಾರ್ಟ್‌ಅಪ್ ಉದ್ಯಮವು ಕಳೆದ ಆರು ತಿಂಗಳಲ್ಲಿ ನಾಲ್ಕು ವರ್ಷಗಳಲ್ಲಿಯೇ ಅತಿ ಕಡಿಮೆ ಫಂಡಿಂಗ್ ಕಂಡಿದೆ. ಈ ವರ್ಷದ ಮೊದಲಾರ್ಧದಲ್ಲಿ 298 ಡೀಲ್‌ಗಳಲ್ಲಿ 3.8 ಶತಕೋಟಿ ಡಾಲರ್ ಫಂಡಿಂಗ್ ಹರಿದು ಬಂದಿದೆ. ಇದು 2022 ರ ದ್ವಿತೀಯಾರ್ಧಕ್ಕೆ ಹೋಲಿಸಿದರೆ (5.9 ಶತಕೋಟಿ ಡಾಲರ್) ಸುಮಾರು ಶೇಕಡಾ 36 ರಷ್ಟು ಇಳಿಕೆಯಾಗಿದೆ.
ಸ್ಟಾರ್ಟಪ್ ಎಂಬ ಪದವು ಕಾರ್ಯಾಚರಣೆಯ ಮೊದಲ ಹಂತಗಳಲ್ಲಿರುವ ಕಂಪನಿಯೊಂದನ್ನು ಸೂಚಿಸುತ್ತದೆ. ಈ ಕಂಪನಿಗಳು ಸಾಮಾನ್ಯವಾಗಿ ಹೆಚ್ಚಿನ ವೆಚ್ಚಗಳು ಮತ್ತು ಸೀಮಿತ ಆದಾಯದೊಂದಿಗೆ ಪ್ರಾರಂಭವಾಗುತ್ತವೆ. ಅದಕ್ಕಾಗಿ ಅವರು ವೆಂಚರ್ ಕ್ಯಾಪಿಟಲಿಸ್ಟ್ಗಳು ಸೇರಿದಂತೆ ವಿವಿಧ ಮೂಲಗಳಿಂದ ಬಂಡವಾಳವನ್ನು ಹುಡುಕುತ್ತಾರೆ.2023 ರ ಮೊದಲಾರ್ಧದಲ್ಲಿ ಭಾರತದಲ್ಲಿ ಯಾವುದೇ ಹೊಸ ಸ್ಟಾರ್ಟಪ್ ಬಂದಿಲ್ಲ. ಒಂದು ವರ್ಷದ ಹಿಂದಿನ ಜನವರಿ – ಜೂನ್ ಅವಧಿಗೆ ಹೋಲಿಸಿದರೆ ಈ ಬಾರಿ ಅದೇ ಅವಧಿಯಲ್ಲಿ ಸ್ಟಾರ್ಟಪ್ ನಿಧಿಯು ಶೇಕಡಾ 70 ಕ್ಕಿಂತ ಹೆಚ್ಚು ಕುಸಿದಿದೆ.