ಏರ್ಟೆಲ್, ಜಿಯೋಗೆ ಶುರುವಾಗಿದೆ ನಡುಕ: ಭಾರತದಲ್ಲಿ ಸ್ಯಾಟ್ ಲೈಟ್ ಇಂಟರ್ನೆಟ್ ಸಂಪರ್ಕ ನೀಡಲು ಸ್ಟಾರ್‌ಲಿಂಕ್‌ ಕಂಪನಿ ರೆಡಿ.!

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಜೆಫ್ ಬೆಜೋಸ್ (Jeff Bezos) ಹಾಗೂ ಎಲಾನ್ ಮಸ್ಕ್ (Elon Musk) ಸ್ಯಾಟ್ ಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕವನ್ನು ಭಾರತದಲ್ಲಿ ನೀಡಲು ಮುಂದಾಗಿದ್ದಾರೆ. ಇದರಿಂದ ಭಾರತದ ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಾದ ಸುನಿಲ್ ಮಿಥಲ್ ಅವರ ಏರ್ಟೆಲ್ (Airtel) ಹಾಗೂ ಮುಖೇಶ್ ಅಂಬಾನಿ ಅವರ ಜಿಯೋಗೆ (Jio) ನಡುಕ ಶುರುವಾಗಿದೆ.

ತಂತ್ರಜ್ಞಾನ ಉದ್ಯಮಿ, ಟೆಸ್ಲಾ (Tesla) ಮತ್ತು ಸ್ಪೇಸ್‌ ಎಕ್ಸ್ ಕಂಪೆನಿಗಳ ಮಾಲಿಕ ಎಲಾನ್ ಮಸ್ಕ್ ಒಡೆತನನದ, ಉಪಗ್ರಹಗಳ ಗುಚ್ಚದ ಮೂಲಕ ಕುಗ್ರಾಮ ಅಥವಾ ಕಾಡಿನಂತಹ ಪ್ರದೇಶದಲ್ಲೂ ಅತಿವೇಗದ ಇಂಟರ್ನೆಟ್‌ ಸೇವೆ ನೀಡುವ ಸ್ಟಾರ್‌ಲಿಂಕ್‌ (Starlink) ಕಂಪನಿ ಶೀಘ್ರದಲ್ಲೇ ಭಾರತದಲ್ಲೂ ತನ್ನ ಸೇವೆ ಆರಂಭಿಸಲಿದೆ. ಜೊತೆಗೆ ಅಮೆಜಾನ್ ಕೂಡ ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ನೀಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಸ್ಟಾರ್ ಲಿಂಕ್ ಕಂಪೆನಿ ಈಗಾಗಲೇ ಭಾರತದ ಸರ್ಕಾರಕ್ಕೆ ಪ್ರಸ್ತಾಪ‌ ಸಲ್ಲಿಸಿದ್ದು, ಸದ್ಯ ಸ್ಟಾರ್‌ಲಿಂಕ್‌ ಕಂಪನಿಯು ಭಾರತದಲ್ಲಿ ಇಂಟರ್ನೆಟ್ ಸೇವೆ ನೀಡಲು ಅಗತ್ಯವಿರುವ ಸರ್ಕಾರಿ ಅನುಮತಿಗಳ ಕುರಿತು ಮಾಹಿತಿ ಪಡೆಯುತ್ತಿದೆ ಎಂದು ತಿಳಿದುಬಂದಿದೆ.

ಸಾಮಾನ್ಯ ಇಂಟರ್ನೆಟ್ ಸೇವೆ ನೀಡುವ ಟೆಲಿಕಾಂ ಕಂಪನಿಗಳು ತಲುಪದ ಕುಗ್ರಾಮ, ಕಾಡು ಅಥವಾ ಇನ್ನಿತರ ದುರ್ಗಮ ಪ್ರದೇಶಗಳಲ್ಲಿ ಉಪಗ್ರಹಗಳ ಗುಚ್ಚದ ಮೂಲಕ ಅಂತರಿಕ್ಷದಿಂದ ಅತಿವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಮೆರಿಕ ಮುಂತಾದೆಡೆ ಸ್ಟಾರ್‌ಲಿಂಕ್‌ ಕಂಪನಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಈ ಸೇವೆಯನ್ನು ಜಗತ್ತಿನಾದ್ಯಂತ ವಿಸ್ತರಿಸಲು ಕಂಪೆನಿ ಉತ್ಸುಕವಾಗಿದೆ.
ಸ್ಟಾರ್ ಲಿಂಕ್ ಈಗಾಗಲೇ ವಿಶ್ವದಾದಂತ್ಯ ಸುಮಾರು ಲಕ್ಷ ಗ್ರಾಹಕರನ್ನ ಹೊಂದಿದೆ.

ಆದರೆ ಸದ್ಯದ ಮಟ್ಟಿಗೆ ಇದು ವಿಧಿಸುತ್ತಿರುವ ಶುಲ್ಕ ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಜನರಿಗೆ ಎಟುಕುವ ಸ್ಥಿತಿಯಲಿಲ್ಲ . ಇದರ ಸೇವೆ ಪಡೆಯಲು ಮೊದಲಿಗೆ 500 ಡಾಲರ್ ನೀಡಬೇಕಾಗುತ್ತದೆ. ಮತ್ತು ಮಾಸಿಕ 99 ಡಾಲರ್ ಹಣವನ್ನ ನೀಡಬೇಕಾಗುತ್ತದೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಪ್ರಥಮವಾಗಿ 36ಸಾವಿರ ನಂತರ ಮಾಸಿಕ 7,400 ರೂಪಾಯಿ ನೀಡಬೇಕಾಗುತ್ತದೆ.