ಎಕ್ಸಾಮ್ ಎಷ್ಟ್ ಈಝೀ ಆಯ್ತಲಾ. ನಾನು ಓದ್ಕಂಡಿದ್ದೆ ಬಂದಿತ್ ಮರೈತಿ. ನಾನ್ ಸಿಲೆಬಸ್ಸ್ ಹೊರಗಿನ್ ಪ್ರಶ್ನೆ ಕೇಳ್ತ್ರಂತ ಹೆದ್ರಿಕಿಯಲ್ ಇದ್ದಿದೆ ಮರಯಾ. ನಾನ್ ಎರಡುವರೆ ಗಂಟೆಯೊಳ್ಗ್ ಪರೀಕ್ಷೆ ಮುಗ್ಸಿದೆ. ಅದೆಲ್ಲಾ ಹೊಯ್ಲಿ ನೀನ್ ನಾಲ್ಕನೆ ಪ್ರಶ್ನೆಗ್ ಏನ್ ಬರ್ದೆ. ನಾನ್ ನಿಂಗೆ ಹೇಳಿಲ್ಯ ಅದೇ ಪ್ರಶ್ನೆ ಕೊಡ್ತಾರಂತ.
೨೦೧೮-೧೯ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಗುರುವಾರ ಕನ್ನಡ ಪರೀಕ್ಷೆ ಬರೆದು ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳ ಬಾಯಿಯಿಂದ ಕೇಳಿಬಂದ ಮಾತುಗಳಿವು.
ಕುಂದಾಪುರದ ಬೋರ್ಡ್ ಹೈಸ್ಕೂಲ್ನಲ್ಲಿ ಎಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದಲೇ ಹೊರಬಂದ ದೃಶ್ಯಗಳು ಕಂಡುಬಂದವು. ಮೊದಲ ದಿನ ಕನ್ನಡ ಪರೀಕ್ಷೆಯಾದ್ದರಿಂದ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮನೆಮಾಡಿದ್ದಲ್ಲದೇ ಪರೀಕ್ಷೆ ಎದುರಿಸಿ ಹೊರಬಂದ ಎಲ್ಲಾ ವಿದ್ಯಾರ್ಥಿಗಳು ಸುಲಭವಾದ ಪ್ರಶ್ನಾಪತ್ರಿಕೆ ಕೊಟ್ಟಿದ್ದಾರೆ ಎಂದು ತಮ್ಮ ತಮ್ಮ ಸಹಪಾಠಿಗಳಲ್ಲಿ ಹೇಳಿಕೊಳ್ಳುತ್ತಾ ಖುಷಿಹಂಚಿಕೊಂಡರು.
ಮೂರು ಗಂಟೆಗಳ ಕಾಲ ಪರೀಕ್ಷೆ ಬರೆದ ವಿದ್ಯಾರ್ಥಿಗಳು ೧೨.೩೦ಕ್ಕೆ ಪರೀಕ್ಷಾ ಕೇಂದ್ರದಿಂದ ಹೊರಬಂದರು. ವಿದ್ಯಾರ್ಥಿಗಳ ಪೋಷಕರು ೧೨ಗಂಟೆಯಿಂದಲೇ ಬೋರ್ಡ್ ಹೈಸ್ಕೂಲು ಗೇಟಿನ ಹೊರಭಾಗದಲ್ಲಿ ನಿಂತು ತಮ್ಮ ಮಕ್ಕಳ ಬರುವಿಕೆಯ ನಿರೀಕ್ಷೆಯಲ್ಲಿರುವ ದೃಶ್ಯಗಳು ಕಾಣಸಿಕ್ಕವು.