ಕಟಪಾಡಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಮಹಾಸಂಕಲ್ಪ ಅಭಿಯಾನ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪಲಿಮಾರು ಮಠದ ಪಟ್ಟದದೇವರಾದ ಹನುಸ್ಸೇವಿತ ಸೀತಾ ಲಕ್ಷ್ಮಣ ಸಹಿತ ಶ್ರೀರಾಮಚಂದ್ರ ದೇವರಿಗೆ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ಶ್ರೀಪಾದರು ಹಾಗೂ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ‘ಶ್ರೀರಾಮ ಸತ್ರ’ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಈ ಪರ್ವಕಾಲದಲ್ಲಿ ಶ್ರೀರಾಮ ತಾರಕ ಮಂತ್ರದ ಜಪ ಸಹಿತ ಹೋಮದೊಂದಿಗೆ, ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸತತ ಹತ್ತು ದಿನಗಳ ಕಾಲವೂ, ವಿವಿಧ ಭಜನಾ ತಂಡಗಳಿಂದ ಭಜನೆ, ವಿವಿಧ ಮಹಿಳಾ ತಂಡಗಳಿಂದ ಲಕ್ಷ್ಮೀ ಶೋಭಾನೆ, ಶ್ರೀರಾಮ ಪ್ರೀತ್ಯರ್ಥವಾಗಿ ಭಕ್ತರಿಂದ ಸಾಮೂಹಿಕ ದೀಪೋತ್ಸವ, ವಿವಿಧ ವಲಯ ಬ್ರಾಹ್ಮಣ ಸಮಿತಿಯಿಂದ ಶ್ರೀರಾಮ ಸಹಸ್ರನಾಮಾವಳಿ, ಶ್ರೀವಿಷ್ಣು ಸಹಸ್ರನಾಮ ಪಾರಾಯಣ,ಅಷ್ಟವಧಾನ, ಶ್ರೀಗಳಿಂದ ರಾಮಾಯಣ ಪ್ರವಚನ ಮಾಲಿಕೆ ನಡೆಯಿತು.
ಪ್ರತಿದಿನವೂ ಶ್ರೀರಾಮ ಜ್ಞಾನ ಸತ್ರದ ಅಂಗವಾಗಿ ವಿವಿಧ ವಿದ್ವಾಂಸರುಗಳಿಗೆ ಗೌರವಾರ್ಪಣೆ, ಶ್ರೀರಾಮ ಸೇವಾ ಸತ್ರದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ “ರಾಘವಾನುಗ್ರಹ” ಪ್ರಶಸ್ತಿ ನೀಡಿ ಸನ್ಮಾನ, ವಿದ್ವಾಂಸರಿಂದ ಅಷ್ಟವಧಾನ ಸೇವೆ ಸೇರಿದಂತೆ ಸಾಂಸ್ಕೃತಿಕ ಸತ್ರಗಳೇ ಬಹು ವೈಭವದಿಂದ ಜರುಗಿದವು.
ರಾಮನವಮಿಯ ಪುಣ್ಯಕಾಲದಲ್ಲಿ, ರಾಮ ದೇವರಿಗೆ ಫಲಪಂಚಾಮೃತ ಮಹಾಭಿಷೇಕ, ರಾಮ ದೇವರ ಡೋಲೋತ್ಸವ ಸೇವೆ, ಮಧ್ಯಾಹ್ನ ಯತಿವರ್ಯರಿಗೆ ಮಾಲಿಕಾ ಮಂಗಳಾರತಿ ನಡೆದು, ರಾಮಸತ್ರದ ಸವಿನೆನಪಿಗಾಗಿ ಸಮಿತಿಯು ಹೊರತಂದ ವಿವಿಧ ಲೇಖಕರು, ವಿವಿಧ ವಿದ್ವಾಂಸರುಗಳು ಬರೆದಿರುವ ಶ್ರೀರಾಮನಿಗೆ ಸಂಬಂಧಪಟ್ಟ ಲೇಖನವುಳ್ಳ “ಸರಯೂ” ಸ್ಮರಣ ಸಂಚಿಕೆ ಶ್ರೀಪಾದರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು. ಸಂಜೆ ರಾಮದೇವರಿಗೆ ಪಲಿಮಾರು ಮಠದ ರಾಮನವಮಿ ಆಚರಣೆಯ ಇತಿಹಾಸದಲ್ಲೇ ಮೊದಲಬಾರಿಗೆ ರಥೋತ್ಸವ ಸೇವೆ, ಅಷ್ಟವಧಾನ ಸೇವೆ ನೆರವೇರಿತು.
ಈ ಸಂದರ್ಭದಲ್ಲಿ ದೇವಳದಲ್ಲಿನ ಸುರಭಿ ಗೋಶಾಲೆಯ ಹಸುವೂ “ರಾಘವ”ನಿಗೆ ಜನ್ಮ ನೀಡಿ ಜನಮಾನಸದೊಳು ಅಚ್ಚೊತ್ತಿದ ರಾಮಸತ್ರ ಶ್ರೀರಾಮದೇವರಿಗೂ, ಶ್ರೀವಿಷ್ಣುಮೂರ್ತಿಗೂ ಪ್ರೀತ್ಯಾರ್ಥವಾಯಿತು ಎಂಬ ಶುಭ ಸಂದೇಶವನ್ನು ನೀಡಿದೆ.
ಇಡೀ ದೇವಳದ ಪರಿಸರವೇ ತ್ರೇತಾಯುಗವನ್ನು ನೆನೆಸುವ ರೀತಿಯಲ್ಲಿ ರಾಮಾಯಣದಲ್ಲಿ ಉಲ್ಲೇಖವಾಗಿರುವ ಸಂಧರ್ಭಗಳ ನೆನಪಿಸುವಂತೆ ಪರ್ಣಕುಟೀರ ಪಂಚವಟಿ, ಶೃಂಗವೇರಪುರ, ಸುಮಂತ ಮೊದಲಾದ ನಾಮಾಂಕಿತದೊಂದಿಗೆ ಮದುಮಗಳಂತೆ ಕಂಗೊಳಿಸುತ್ತಿತ್ತು. ಹತ್ತು ದಿನಗಳ ಕಾಲ ಇಡೀ ಮಟ್ಟು ಗ್ರಾಮವೇ ನ ಭೂತೋ ನಾ ಭವಿಷ್ಯತಿ ಎಂಬಂತೆ ನಡೆದ ರಾಮಸತ್ರಕ್ಕೆ ಸಾಕ್ಷಿಭೂತವಾಗಿದೆ. ಬಹು ವಿಜ್ರಂಭಣೆಯಿಂದ ಜರುಗಿದ ಈ ಪರ್ವ ಕಾರ್ಯದಿಂದಾಗಿ ದೇಶವು ಸುಭಿಕ್ಷೆಯಿಂದ ಸಮೃದ್ಧಿಯಾಗಲಿ ಎನ್ನುವ ಆಶಯ.