ಕಂಬಳದಲ್ಲಿ ನೂತನ ಅಮೋಘ ದಾಖಲೆ ಬರೆದ ಶ್ರೀನಿವಾಸ್ ಗೌಡ; ಕೇವಲ 8.96 ಸೆಕೆಂಡ್ 100 ಮೀ. ಓಟ

ಬೆಳ್ತಂಗಡಿ: ಇಲ್ಲಿನ ವೇಣೂರಿನಲ್ಲಿ ಶನಿವಾರ ಪ್ರಾರಂಭಗೊಂಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ನೂತನ‌ ಸರ್ವ ಶ್ರೇಷ್ಠ ದಾಖಲೆ ನಿರ್ಮಾಣವಾಗಿದೆ. ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರು 100 ಮೀ. ಉದ್ದದವನ್ನು  ಕೇವಲ 8.96 ಸೆಕಂಡ್ ನಲ್ಲಿ ಕ್ರಮಿಸಿ ಈ ಹಿಂದಿನ‌ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದ್ದಾರೆ.

ಕಳೆದ ವರ್ಷ ಐಕಳ ಕಂಬಳದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಓಡಿಸುವ ಮೂಲಕ ಸಾಧನೆ ಮಾಡಿದ್ದ ಶ್ರೀನಿವಾಸ ಗೌಡರು ಇಂದು ಅವರದ್ದೇ ಕೋಣಗಳನ್ನು ಓಡಿಸುವ ಮೂಲಕ ಈ ವಿನೂತನ ದಾಖಲೆಯನ್ನು ಬರೆದಿದ್ದಾರೆ.

ಶ್ರೀನಿವಾಸ ಗೌಡರ ಅಂದಿನ ಸಾಧನೆಯ ಬಳಿಕ ಬೈಂದೂರು ವಿಶ್ವನಾಥ ದೇವಾಡಿಗ ಅವರು ಈ ವರ್ಷದ ಐಕಳ ಕಂಬಳದಲ್ಲಿ 9.15 ಸೆಂಕಂಡ್ ನಲ್ಲಿ ಬೋಳದ ಗುತ್ತುವಿನ ಕೋಣಗಳನ್ನು ಓಡಿಸಿ ದಾಖಲೆ ಬರೆದಿದ್ದರು. ಆನಂತರ ಬಜಗೋಳಿ ನಿಶಾಂತ್ ಶೆಟ್ಟಿ 9.19 ಸೆಕೆಂಡ್ ನಲ್ಲಿ 100 ಓಡುವ ಮೂಲಕ ಸಾಧನೆ ಮಾಡಿದ್ದರು. ಸದ್ಯ ವಿಶ್ವನಾಥ ದೇವಾಡಿಗ ಅವರು 9.15 ಸೆಕಂಡ್ ನಲ್ಲಿ ಓಡಿದ್ದೇ ದಾಖಲೆ ಆಗಿತ್ತು. ಆದರೆ ವೇಣೂರು ಕಂಬಳದಲ್ಲಿ ಶ್ರೀನಿವಾಸ ಗೌಡರು 8.96 ಸೆಕೆಂಡ್ ನಲ್ಲಿ ಓಡುವ ಮೂಲಕ ಈ ಹಿಂದಿನ‌ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದ್ದಾರೆ.