ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾ ಸಂಸತ್ ನ 225 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಮಹಿಂದ ರಾಜಪಕ್ಸೆ ಅವರ ಪಕ್ಷ ಎಸ್‌ಎಲ್‌ಪಿಪಿ 146 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ. ಕೊರೊನಾ ಕಾರಣದಿಂದಾಗಿ ಚುನಾವಣೆಯನ್ನು ಎರಡು ಸಲ ಮುಂದೂಡಲಾಗಿತ್ತು. ಆಗಸ್ಟ್ 5 ರಂದು ಸಂಸತ್ ಚುನಾವಣೆ ನಡೆದಿತ್ತು.
ರಾಜಪಕ್ಸೆಯವರ ಎಸ್‌ಎಲ್‌ಪಿಪಿ ಪಕ್ಷ 146 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾಗಿರುವ ಸಜಿತ್ ಪ್ರೇಮದಾಸ ಅವರ ಪಕ್ಷ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‌ಪಿ) ಕೇವಲ 53 ಸ್ಥಾನಗಳನ್ನು ಪಡೆದಿದೆ. ತಮಿಳು ಪಕ್ಷಗಳು 16 ಹಾಗೂ ಎಡ ಪಕ್ಷಗಳ ಮೈತ್ರಿಕೂಟ 10 ಸ್ಥಾನಗಳನ್ನು ಪಡೆದಿವೆ ಎಂದು ಶ್ರೀಲಂಕಾ ಮಾಧ್ಯಮಗಳು ಇಂದು ಬೆಳಗ್ಗೆ ವರದಿ ಮಾಡಿವೆ.
ಸುಮಾರು ಒಂದೂವರೆ ಕೋಟಿ ಮತದಾರರಿರುವ ಶ್ರೀಲಂಕಾದಲ್ಲಿ, ರಾಜಪಕ್ಷೆ ಅವರಿಗೆ 60.8 ಲಕ್ಷ ಜನರು ಮತ ನೀಡಿದ್ದಾರೆ. ಎಸ್‌ಎಲ್‌ಪಿಪಿ ಒಟ್ಟಾರೆ ಶೇ 60 ರಷ್ಟು ಮತಗಳ ಪಡೆದರೆ, ಯುಎನ್‌ಪಿ ಶೇ 20ರಷ್ಟು ಮತಗಳನ್ನು ಪಡೆದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಪಕ್ಸೆ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.