ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಹಾಗೂ ಮಕರ ಸಂಕ್ರಮಣ ಉತ್ಸವ

ಕುಂದಾಪುರ: ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಹಾಗೂ ಮಕರ ಸಂಕ್ರಮಣ ಉತ್ಸವ ಸಂಭ್ರಮದಿಂದ ಜರುಗಿತು. ಮೂರು ದಿನಗಳ ಕಾಲ ನಡೆಯುವ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಗೆಂಡ ಸೇವೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಸೋಮವಾರದ ಶುಭ ಮಹೂರ್ತದಲ್ಲಿ ವಿವಿಧ ಧಾರ್ಮಿಕ ಪೂಜೆಯನ್ನು ಆರಂಭಿಸುವ ಮೂಲಕ ಚಾಲನೆ ನೀಡಲಾಯಿತು.

ಭಕ್ತಿ ಸಾಗರದಲ್ಲಿ ಲೀನ:
ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಹಾಗೂ ಪೂಜೆಗಳನ್ನು ಸಲ್ಲಿಸಿದರು. ಜಾತ್ರಾ ಮಹೋತ್ಸವದ ಮೊದಲ ದಿನದಿಂದಲೆ ಆಗಮಿಸುವ ಭಕ್ತರು ಹಣ್ಣು ಕಾಯಿಗಳನ್ನು ತಲೆ ಮೇಲೆ ಇಟ್ಟುಕೊಂಡು ದೇವರ ದರ್ಶನ ಪಡೆದುಕೊಂಡು ಪೂಜೆಯನ್ನು ಸಲ್ಲಿಸುತ್ತಾರೆ.

ಅದ್ದೂರಿ ವ್ಯವಸ್ಥೆ;

ಜಾತ್ರಾ ಸಮಯದಲ್ಲಿ   ಉಡುಪಿ, ಮಂಗಳೂರು, ಕಾರ್ಕಳ ಭಾಗದಿಂದ ಬರುವ ಭಕ್ತರಿಗಾಗಿ ವಿಶೇಷವಾದ ವಾಹನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಸೋಮವಾರ ರಾತ್ರಿ ನಡೆದ ಗೆಂಡ ಸೇವೆಯಲ್ಲಿಯೂ ಸಾವಿರಾರು ಜನರು ಪಾಲ್ಗೊಂಡು ಧಾರ್ಮಿಕ ಸೇವೆಯನ್ನು ಸಲ್ಲಿಸಿದ್ದಾರೆ. ಜ.೧೫ ಮತ್ತು ೧೬ರಂದು ಮಂಡಲ ಸೇವೆ ನಡೆಯುತ್ತದೆ. ಮುಂದಿನ ಕುಂಭ ಸಂಕ್ರಮಣದ ತನಕವೂ ಇಲ್ಲಿ ಹಬ್ಬದ ಸಂಭ್ರಮ ನಡೆಯುತ್ತದೆ.
ಸೋಮವಾರ ಕ್ಷೇತ್ರದ ಅರ್ಚಕ ಶಂಕರ ಮಂಜರು ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಶೆಟ್ಟಿ, ನಾಡೋಜ ಡಾ.ಜಿ.ಶಂಕರ, ಕೊಲ್ಲೂರು ಕ್ಷೇತ್ರದ ಧರ್ಮದರ್ಶಿ ವಂಡಬಳ್ಳಿ ಜಯರಾಮ್‌ಶೆಟ್ಟಿ, ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು, ಮುಂಬೈ ಉದ್ಯಮಿ ಸತೀಶ ಕೊಠಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿವಾಕರ ಬಾಬು, ಅರ್ಚಕರಾದ ವಿಘ್ನೇಶ ಮಂಜ, ಶ್ರೀಧರ ಮಂಜ, ಚಂದ್ರಶೇಖರ ಮಂಜ, ಮಂಜುನಾಥ ಭಟ್, ದೈವ ಪಾತ್ರಿ ಶ್ರೀಧರ ಮರ್ಡಿ ಹಾಗೂ ಗಣಪಯ್ಯ ಶೆಟ್ಟಿ  ಉಪಸ್ಥಿತರಿದ್ದರು.