ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಒಂದಾಗಿರುವ ಶ್ರೀ ಭಂಡಾರಕೇರಿ ಮಠದ ಶ್ರೀ ಸತ್ಯತೀರ್ಥ ಯತಿಪರಂಪರೆಯ ಇಬ್ಬರು ಪೂರ್ವಯತಿಗಳ ಮೂಲ ವೃಂದಾವನವು ಶೋಧಿಸಲ್ಪಟ್ಟಿದ್ದು, ಅವುಗಳ ಪುನರ್ ನಿರ್ಮಾಣ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಶ್ರೀಮಠದ ಈಗಣ ಯತಿಗಳಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ನೇತೃತ್ವ, ಜೋತಿರ್ವಿದ್ವಾನ್ ಇರ್ವತ್ತೂರು ಗೋಪಾಲ ಜೋಯಿಸರ ಮಾರ್ಗದರ್ಶನ, ವಿದ್ವಾನ್ ಕೃಷ್ಣ ಕುಮಾರ ಆಚಾರ್ಯರ ಅಧ್ವರ್ಯುತನದಲ್ಲಿ ಸೋಮವಾರ ನೆರವೇರಿತು.
ಶ್ರೀ ಮಠದಲ್ಲಿ ಇತ್ತೀಚೆಗೆ ನಡೆದ ಆರೂಢ ಪ್ರಶ್ನೆಯ ಸಂದರ್ಭದಲ್ಲಿ ಪೂರ್ವಯತಿದ್ವರ ವೃಂದಾವನ ಭೂಗತವಾಗಿರುವುದು ಅರಿವಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಠದ ಅಧೀನದ ಜಮಿನಿನಲ್ಲಿ ಶೋಧ ನಡೆಸಿದಾಗ ಪರಂಪರೆಯ 25ನೇ ಯತಿಗಳಾದ ಶ್ರೀ ವಿದ್ಯಾರಾಜೇಂದ್ರತೀರ್ಥರು ಮತ್ತು 13 ನೆಯವರಾದ ಶ್ರೀ ವಿಶ್ವೋತ್ತಮತೀರ್ಥರ ವೃಂದಾವನದ ಸ್ಥಳ ಶೋಧಿಸಲ್ಪಟ್ಟಿತ್ತು . ಇದೀಗ ಅದೇ ಸ್ಥಳದಲ್ಲಿ ನೂತನ ಶಿಲಾಮಯ ವೃಂದಾವನಗಳನ್ನು ನಿರ್ಮಿಸಿ ಪುನಃ ಪ್ರತಿಷ್ಠಾಪಿಸಲಾಗಿದೆ.
ಅದೇ ರೀತಿ ಮಠದ ಆವರಣದಲ್ಲಿ ಆರಾಧಿಸಲಾಗುತ್ತಿರುವ ವೃಂದಾವನಗಳಲ್ಲಿ ಒಂದು ಯಾರದ್ದೆಂಬ ಬಗ್ಗೆಯೂ ಮಾಹಿತಿ ಇರಲಿಲ್ಲ. ಇದೀಗ ಆ ಬಗ್ಗೆಯೂ ಬಹಳ ನಿಷ್ಕರ್ಷೆ ನಡೆಸಿ 3ನೆಯ ಯತಿಗಳಾದ ಶ್ರೀ ಹಿರಣ್ಯಗರ್ಭ ತೀರ್ಥರದ್ದೆಂದು ನಿರ್ಣಯಿಸಲಾಗಿದೆ.
ಶ್ರೀಮಠದ ಬಗ್ಗೆ ಮಾಹಿತಿ:
ಶ್ರೀ ಕೋದಂಡರಾಮ ದೇವರು ಆರಾಧ್ಯಮೂರ್ತಿಯಾಗಿರುವ ಶ್ರೀ ಭಂಡಾರಕೇರಿ ಮಠವು ಉಡುಪಿ ಸಮೀಪದ ಬಾರಕೂರಿನಲ್ಲಿ ಮೂಲ ಮಠವನ್ನು ಹೊಂದಿದ್ದು, ಉಡುಪಿ ರಥಬೀದಿಯ ಸುತ್ತಿನಲ್ಲೂ ಒಂದು ಮಠ ಇದೆ. ಬಾರಕೂರು ಅರಸೊತ್ತಿಗೆಯಿಂದ ಭರಪೂರ ಮಾನ್ಯತೆಯನ್ನು ಪಡೆದಿತ್ತು ಎನ್ನುವುದು ಶ್ರೀ ಮಠದಲ್ಲಿ ಹಾಗೂ ಬಾರಕೂರಿನಲ್ಲಿ ಲಭ್ಯವಿರುವ ದಾನಶಾಸನಗಳಿಂದ ತಿಳಿದುಬರುತ್ತದೆ. ಮೈಸೂರು ಬೆಂಗಳೂರುಗಳಲ್ಲೂ ಮಠದ ಶಾಖೆಗಳಿವೆ.
ಅನೇಕ ಮಹಾಜ್ಞಾನಿಗಳ ಈ ಯತಿ ಪರಂಪರೆಯಲ್ಲಿ ಶ್ರೀ ವಾದಿರಾಜ ಗುರು ಸಾರ್ವಭೌಮರ ಪೂರ್ವಾಶ್ರಮದ ಸಹೋದರರಾಗಿದ್ದ ಶ್ರೀ ಸುರೋತ್ತಮ ತೀರ್ಥರೂ ಸೇರಿದ್ದಾರೆ. ಈ ಮಠದಲ್ಲಿ ಯತಿಗಳಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥರು ಬಳಿಕ ಪಲಿಮಾರು ಮಠಕ್ಕೆ ನಿಯುಕ್ತಿಗೊಂಡು ಸ್ಮರಣೀಯವೆನಿಸುವ ಎರಡು ಪರ್ಯಾಯಗಳನ್ನು ನಡೆಸಿದ್ದು ಈಗ ಇತಿಹಾಸ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೂ ಸನ್ಯಾಸ ಸ್ವೀಕರಿಸಿದ ಬಳಿಕ ಅನೇಕ ವರ್ಷ ಭಂಡಾರಕೇರಿ ಮೂಲ ಮಠದಲ್ಲೇ ಶಾಸ್ತ್ರಾಧ್ಯಯನ ನಡೆಸಿದ್ದು ವಿಶೇಷ .
ಪ್ರಸ್ತುತ 34 ನೇರ ಉತ್ತರಾಧಿಕಾರಿಗಳಾಗಿರುವ ಶ್ರೀವಿದ್ಯೇಶತೀಥರು ಸ್ವಭಾವತಃ ಅಂತರ್ಮುಖಿಗಳೂ, ಅಧ್ಯಯನಶೀಲರೂ, ತಪಃ ಸ್ವಾಧ್ಯಾಯ ನಿಷ್ಟರೂ ಆಗಿದ್ದಾರೆ. ಕವಿಗಳೂ ಆಗಿರುವ ಇವರು ಸಂಸ್ಕೃತ ಕನ್ನಡದಲ್ಲಿ ದೇವ – ದೇವತೆಗಳನ್ನು ಸ್ತುತಿಸುವ ಪದ್ಯ ಕಾವ್ಯಗಳನ್ನು ರಚಿಸಿದ್ದಾರೆ. ಶ್ರೀ ಭಾಗವತ, ಮಹಾಭಾರತವೇ ಮೊದಲಾದವುಗಳ ನಿರಂತರ ಪ್ರವಚನಗಳ ಮುಲಕ ಶ್ರೀ ಮಧ್ವರ ತತ್ತ್ವ ಸಂದೇಶ ಪ್ರಸಾರ ಕಾರ್ಯ ನಿರತರಾಗಿದ್ದಾರೆ.
✍️ *ಜಿ ವಾಸುದೇವ ಭಟ್ ಪೆರಂಪಳ್ಳಿ*