ಮಳ್ಳಿ ಮಳ್ಳಿ ಸೂರ್ನಳ್ಳಿ: ಈ ದೋಸೆ ತಿಂದಿಲ್ಲಾಂದ್ರೆ ಬೇಗ ತಿನ್ನಿ

ಮಳ್ಳಿ..ಮಳ್ಳಿ.ಮಿಂಚುಳ್ಳಿ ಹಾಡು ಕೇಳಿದ್ದೇವೆ.. ನೀರ್‌ನಳ್ಳಿ, ನೀರುಳ್ಳಿನೂ ಕೇಳಿದ್ದೀವಿ ಇದ್ಯಾವುದು ಸೂರ್ನಳ್ಳಿ? ಅಂತ ನಿಮ್ಮಲ್ಲೊಂದು ಜಿಕ್ ಅಂತ ಪ್ರಶ್ನೆ ಮೂಡಿರಬಹುದು ಅದಕ್ಕೆ ಉತ್ತರ ಇಲ್ಲಿದೆ. ಈ ರುಚಿ ಟೇಸ್ಟಿ  ದೋಸೆಯ ಹೆಸರು ಸೂರ್ನಳ್ಳಿ. ತಿಂದರೆ ಮನಸೂರೆಗೊಳ್ಳುತ್ತದೆ.

ಇದು ಕರಾವಳಿ ಸ್ಪೆಷಲ್ ಮಾರ್ರೆ:  

ಒಂದೊಂದು ಜಿಲ್ಲೆಗೂ. ತರಹೇವಾರಿ, ತಿಂಡಿ-ತೀರ್ಥ ಆ ಊರಿನ ಸೊಗಡಿಗೆ ತಕ್ಕಂತೆ ಹುಟ್ಟಿಕೊಂಡಿರೋ ಹಾಗೆ, ಈ ಸೂರ್ನಳ್ಳಿ ಕರಾವಳಿ ಕಡಲ ತಡಿಯ ಮಂದಿಯ ಬಾಯಲ್ಲಿ ಥಳುಕು ಹಾಕಿಕೊಂಡಿರೋ ಸ್ಪೆಶಲ್ ದೋಸೆ. ಉಡುಪಿ ಜಿಲ್ಲೆಯ ಕೊಂಕಣಿ ಸಮುದಾಯದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಈ ಸೂರ್ನಳ್ಳಿ ದೋಸೆ, ತನ್ನ ವಿಭಿನ್ನ ರುಚಿ ಹಾಗೂ ಸ್ವಾಧಿಷ್ಟತೆಯೊಂದಿಗೆ ದೋಸೆ ಪ್ರಿಯರ ಬಾಯಲ್ಲಿ ಸಂಚಲನ ಉಂಟು ಮಾಡಿದೆ. ಇಲ್ಲಿನ ಕೆಲ ತಿಂಡಿಪೋತರ ತಂಗುದಾಣದಲ್ಲೂ ,ಕೆಲವೊಂದು ಹೊಟೇಲ್ ಗಳಲ್ಲೂ ಈ ದೋಸೆಗೆ ಶರಣಾಗಿ ನಾಲಗೆ ಚಪಲ ತೀರಿಸಿಕೊಳ್ಳುವ ಮಂದಿ ಇದ್ದಾರೆ.

ದೋಸೆಯೇ ನಿನ್ನ ಮೇಲೆ ಆಸೆ:

ದಟ್ಟ ಹಳದಿ ಬಣ್ಣದ ಈ ದೋಸೆ, ಕಣ್ಣ ತಣಿಸುವ ಹಳದಿ ಮಾತ್ರವಲ್ಲ, ಆರೋಗ್ಯಕ್ಕೆ ಹೆಲ್ತಿಯೂ ಹೌದು. ನೋಡಲು ಆಕಾರದಲ್ಲಿ ಥೇಟ್ ಸಾಮಾನ್ಯ ದೋಸೆಯಂತೆಯೇ ತೋರುವ ಸೂರ್ನಳ್ಳಿಯ ರುಚಿ ಮಾತ್ರ, ಕೊಂಚ ಖಾರ. ಕೊಂಚ ಸಿಹಿಯಿಂದ ಸಮ್ಮಿಳಿತ. ಕಾವಲಿ ಮೇಲೆ ಇದ್ದಾಗಲೇ ಬೆಣ್ಣೆ ಮುದ್ದೆ ಬಿದ್ದರಂತೂ ದೋಸೆಯ ಒಂದೊಂದು ತುಂಡು ಬಾಯಿಗಿಳಿಸುವಾಗಲೂ ನಾಲಗೆ ಆಹಾ ಎನ್ನುತ್ತದೆ. ಬೆಣ್ಣೆ ಇಲ್ಲದೇ ಬರೀ ಎಣ್ಣೆ ಹಚ್ಚಿ ತಿಂದರೂ ಎಂಥಾ ಸ್ವಾದ. ಆದರೆ ತುಪ್ಪ ಬಿದ್ದರಂತೂ ರುಚಿ ಮತ್ತೂ ಮತ್ತೇರಿಕೊಳ್ಳುತ್ತದೆ.

ಬಗೆ ಬಗೆ ದೋಸೆ:

ಕರಾವಳಿಯ ಕೆಲ ಹೊಟೆಲ್ಲುಗಳಲ್ಲಿ ಸಿಗುವ ಈ ದೋಸೆ ಇಲ್ಲಿನ ಗೌಡ ಸಾರಸ್ವತ ಬಾಹ್ಮಣರ ಮನೆಗಳಲ್ಲಂತೂ ಸೂರ್ನಳ್ಳಿ ಖಾಯಂ ಸದಸ್ಯ. ಇವರಿಂದಲೇ ಈ ದೋಸೆಯ ಹುಟ್ಟು. ಬೆಳವಣಿಗೆ ಶುರುವಾಯಿತು. ಮೆಂತ್ಯ ಸೂರ್ನಳ್ಳಿ, ಸೌತೆಕಾಯಿ ಸೂರ್ನಳ್ಳಿ, ಕುಂಬಳಕಾಯಿ ಸೂರ್ನಳ್ಳಿ ಹೀಗೆ, ಬಗೆ ಬಗೆ ರುಚಿಯ ಸೂರ್ನಳ್ಳಿಗಳು ಇಲ್ಲಿ ಫೇಮಸ್ಸು. ಬಿಸಿ..ಬಿಸಿ..ಇದ್ದಾಗಲೇ ಹೊಟ್ಟೆಗೆ ಬೀಸಿ ಕೊಂಡರೆ, ಬಾಯಿಗಿಳಿದು ಬಾಯಿ ಕಿಕ್ಕೇರುತ್ತದೆ. ದೋಸೆಗೆ ಚಟ್ನಿ ನೆಂಚಿ ತಿಂದರೂ ಸೂಪರ್.

 ಎಲ್ಲಿ ಸಿಗುತ್ತದೆ?

ಕಾರ್ಕಳದ ತಾಜ್ ಮಹಲ್ ಹೋಟೇಲ್, ಪ್ರಕಾಶ್ ಹೊಟೇಲ್, ಮಂಗಳೂರಿನ ತಾಜ್ ಮಹಲ್  ಕುಂದಾಪುರ, ಉಡುಪಿಯ ಕೆಲವೊಂದು ಹೊಟೇಲ್ ಗಳಲ್ಲಿ ಈ ದೋಸೆ ಸಿಗುತ್ತದೆ. ಸದ್ಯಕ್ಕೆ ನಿಮಗೂ ಈ ಸೂರ್ನಳ್ಳಿ ತಿನ್ನುವ ಮನಸ್ಸಾದರೆ ಬೇಗ  ಈ ಹೊಟೇಲ್ ಗಳಿಗೆ ನುಗ್ಗಿ ದೋಸೆ  ಆಸೆ ತೀರಿಸಿಕೊಳ್ಳಿ.

ಮನೇಲಿ ಮಾಡೋಕೆ ಟ್ರೈ ಮಾಡಿ:

ಏನ್ ಬೇಕು?

ಒಂದು ಕಪ್ ದೋಸೆ ಅಕ್ಕಿ, ಒಂದು ಕಪ್ ಕಾಯಿತುರಿ, ಎರಡು ಕಪ್ ಅವಲಕ್ಕಿ, 1.5 ಕಪ್ ಮೊಸರು,    1.5 ಕಪ್ ಬೆಲ್ಲ, ಉಪ್ಪು,

 ಮಾಡೋದ್ ಹೇಗೆ?

ಅಕ್ಕಿಯನ್ನು ೫ ಗಂಟೆ ನೆನೆಸಿಡಿ, ನೆನಸಿಟ್ಟ ಅವಲಕ್ಕಿ, ಕಾಯಿತುರಿ,ಮೊಸರು, ಬೆಲ್ಲ ಸೇರಿಸಿ ಅರೆದು ನುಣ್ಣನೆ ಹಿಟ್ಟು ಮಾಡಿಕೊಳ್ಳಿ, ಅದನ್ನು ಮೂರು ಗಂಟೆ ಹುದುಗಲು ಬಿಡಿ, ರುಚಿಗೆ ತಕ್ಕ ಉಪ್ಪು ಸೇರಿಸಿಕೊಂಡು ಕಾವಲಿ ಅಲ್ಲಿ ಎರೆದು ನೋಡಿ, ಈಗ ದೋಸೆ ರೆಡಿ.

-ಪ್ರಸಾದ್ ಶೆಣೈ ಆರ್.ಕೆ