ಮಾಹೆ ಗಾಂಧಿಯನ್ ಸೆಂಟರಿನಲ್ಲಿ ‘ಗಾಂಧಿಯ ವಿಶ್ವಾತ್ಮಕ ದೃಷ್ಟಿಕೋನ’ ಕುರಿತು ವಿಶೇಷ ಉಪನ್ಯಾಸ

ಮಣಿಪಾಲ: ಸಂವಾದದ ಮೂಲಕ ಸಂಘರ್ಷದ ಪರಿಹಾರವು ಈ ಸಮಯದ ಅಗತ್ಯವಾಗಿದೆ, ಇದು ಮಹಾತ್ಮ ಗಾಂಧಿಯವರ ಮಹತ್ವದ ಪುಟ್ಟ ಪುಸ್ತಕವಾದ ‘ಹಿಂದ್ ಸ್ವರಾಜ್‌’ ನಲ್ಲಿ ಚೆನ್ನಾಗಿ ಪ್ರತಿಫಲಿಸುತ್ತದೆ ಎಂದು ರಾಜಕೀಯ ಶಾಸ್ತ್ರಜ್ಞ ಡಾ ರಾಜಾರಾಮ್ ತೋಳ್ಪಾಡಿ ಹೇಳಿದರು.

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಉಡುಪಿ ರೋಟರಿ ಕ್ಲಬ್ ಮತ್ತು ಯುನೆಸ್ಕೋ ಪೀಸ್ ಚೇರ್ ಜಂಟಿಯಾಗಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ‘ಗಾಂಧಿಯ ವಿಶ್ವಾತ್ಮಕ ದೃಷ್ಟಿಕೋನ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಡಾ.ತೋಳ್ಪಾಡಿ, ಹಿಂದ್ ಸ್ವರಾಜ್ ಓದುಗ ಮತ್ತು ಸಂಪಾದಕನ ನಡುವಿನ ಸಂಕೀರ್ಣ ಪ್ರಶ್ನೆಗಳನ್ನೊಳಗೊಂಡ ಸಂವಾದದ ಮಾದರಿಯನ್ನು ಅಳವಡಿಸಿಕೊಂಡಿದೆ ಎಂದು ನುಡಿದರು.

ನಾವು ಸಂವಾದವೇ ಸಾಧ್ಯವಿಲ್ಲದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಮತ್ತು ಆ ಕಾರಣದಿಂದಲೇ ಹಿಂದ್ ಸ್ವರಾಜ್‌ನಲ್ಲಿ ಗಾಂಧೀಜಿ ಪ್ರತಿಪಾದಿಸಿದ ಸಂವಾದದ ವಿಧಾನವು ಸಮಕಾಲೀನ ಅಗತ್ಯವಾಗಿದೆ ಎಂದರು.

ಹಿಂದ್ ಸ್ವರಾಜ್ ನಲ್ಲಿ, ಮಹಾತ್ಮಾ ಗಾಂಧಿಯವರು ಆಧುನಿಕ ನಾಗರಿಕತೆಗೆ ಪರ್ಯಾಯವನ್ನು ಕಲ್ಪಿಸಲು ಪ್ರಯತ್ನಿಸುತ್ತಿದ್ದರು. ಸತ್ಯ, ಅಹಿಂಸೆ ಮತ್ತು ಸ್ವರಾಜ್ಯ ಎಂಬ ಅವರ ಕಲ್ಪನೆಗಳ ಮೇಲೆ ನಾಗರಿಕತೆಯನ್ನು ನಿರ್ಮಿಸುವ ಪ್ರಯತ್ನ ಅದಾಗಿತ್ತು. ಈ ಮೂರು ಪರಿಕಲ್ಪನೆಗಳು ಅವರ ವಿಸ್ತಾರವಾಗುತ್ತಿರುವ ತಾತ್ವಿಕ ನಿಲುವುಗಳು ಮತ್ತು ಈ ಬಗೆಯ ಪರ್ಯಾಯ ನಾಗರಿಕತೆ ಕೇವಲ ಭಾರತದ ವಿಮೋಚನೆಯಲ್ಲ ಬದಲಾಗಿ ಇಂಗ್ಲೆಂಡನ್ನೂ ಸೇರಿದಂತೆ ಇಡೀ ಮಾನವಕುಲದ ವಿಮೋಚನೆ ಎಂದು ಗಾಂಧೀಜಿ ಭಾವಿಸಿದ್ದರು, ಎಂದು ಡಾ ತೋಳ್ಪಾಡಿ ಹೇಳಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಭಾರತದ ಆತ್ಮವು ಅದರ ‘ಬಹುತ್ವ ಮತ್ತು ವಿವಿಧತೆಯಲ್ಲಿ ಏಕತೆ’ ಎಂಬ ತತ್ವದಲ್ಲಿ ನೆಲೆಸಿದೆ ಎಂದರು.

ಹಿರಿಯ ರೋಟರಿಯನ್ನರಾದ ಚಂದ್ರಶೇಖರ ಅಡಿಗ, ದೀಪಾ ಭಂಡಾರಿ ಮತ್ತು ಸುಬ್ರಹ್ಮಣ್ಯ ಬಾಸ್ರಿ ಅವರು ವಿಶ್ವಶಾಂತಿಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಗಾಂಧಿ ತತ್ವ, ವಿಶ್ವಶಾಂತಿ ಮತ್ತು ರೋಟರಿ ಇಂಟರ್‌ನ್ಯಾಷನಲ್‌ನ ಚಟುವಟಿಕೆಗಳ ನಡುವಿನ ಸಂಬಂಧವನ್ನು ವಿವರಿಸಿದರು.

ಗಾಂಧೀಜಿಯವರು ‘ದೇವರೇ ಸತ್ಯ’ ತತ್ವದಿಂದ ‘ಸತ್ಯವೇ ದೇವರು’ ತತ್ವದೆಡೆಗೆ ಹೇಗೆ ಸಾಗಿದರು ಎಂಬುದನ್ನು ಪ್ರೊ.ಫಣಿರಾಜ್ ವಿವರಿಸಿದರು.

ಎಂಐಟಿ ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೌಸ್ತುಭ ಶೆಟ್ಟಿ ವಂದಿಸಿದರು, ಗೌತಮಿ ಕಾಕತ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮವು ಜಿಸಿಪಿಎಎಸ್ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಹಿರಿಯ ರೋಟರಿಯನ್‌ಗಳನ್ನು ಒಳಗೊಂಡ, ಶ್ರಾವ್ಯ ಬಾಸ್ರಿ ಮತ್ತು ಅವರ ತಂಡವು ಸಲ್ಲಿಸಿದ ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾಯಿತು. ಇದೇ ಸಂದರ್ಭದಲ್ಲಿ ಭೂಮಿಗೀತಾ ತಂಡದ, ಸಂತೋಷ್ ನಾಯಕ್ ಪಟ್ಲ ನಿರ್ದೇಶನದ, ಗಾಂಧೀಜಿಯವರ ಜೀವನದ ಕುರಿತಾದ ಚಿಂತನಶೀಲ ನಾಟಕ ‘ಹೇ ರಾಮ್’ ಪ್ರದರ್ಶನಗೊಂಡಿತು. ಈ ನಾಟಕವು ಗಾಂಧೀಜಿಯವರ ಕುರಿತಾದ ಅನೇಕ ನಾಟಕಗಳ ಸಂಕಲನವಾಗಿದೆ, ಡಾ ಬಿ. ಆರ್ ಅಂಬೇಡ್ಕರ್, ಮಗ ಹರಿಲಾಲ್, ಪತ್ನಿ ಕಸ್ತೂರಬಾ, ಹಿಂದೂ-ಮುಸ್ಲಿಂ ಪ್ರಶ್ನೆ ಇತ್ಯಾದಿ ಮಹತ್ವದ ಪ್ರಶ್ನೆಗಳೊಂದಿಗೆ ಗಾಂಧೀಜಿಯವರ ತಾತ್ವಿಕ ಮುಖಾಮುಖಿಯನ್ನು ನಾಟಕ ಬಿಂಬಿಸುತ್ತದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ರೋಟರಿ ಸದಸ್ಯರು, ಇತರ ಅತಿಥಿಗಳು ಭಾಗವಹಿಸಿದ್ದರು. ಮತ್ತು ಜಿಸಿಪಿಎಎಸ್ ನ ಇಕೋಸೊಫಿ, ಏಸ್ತೆಟಿಕ್ಸ್, ಪೀಸ್ ಮತ್ತು ಆರ್ಟ್ ಮೀಡಿಯಾ ದ ವಿದ್ಯಾರ್ಥಿಗಳು ಉಡುಪಿ ರೋಟರಿ ಸದಸ್ಯರೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.