ಶ್ರೀ ಪೀಠಮ್ ವಾಟ್ಸಪ್ ಗ್ರೂಪಿನ ಸದಸ್ಯರಿಂದ ವಿಶೇಷ ಕಾರ್ಯಕ್ರಮ: 33 ಗೋದಾನ, 33 ಗೋಗ್ರಾಸ‌, 33 ಪವಮಾನ

ನೀಲಾವರ: 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ 33 ಸಂಖ್ಯೆಯಲ್ಲಿ ದೇವತಾ ಸತ್ಕರ್ಮಗಳನ್ನು ನಡೆಸಿದರೆ ವಿಶೇಷ ಫಲಪ್ರದ ಎನ್ನುವುದು ಶಾಸ್ತ್ರವಚನ.

ಈ ಹಿನ್ನೆಲೆಯಲ್ಲಿ ಯುವ ವೈದಿಕ ವಿದ್ವಾಂಸ ವಾಮಂಜೂರು ಶ್ರೀಹರಿ ಉಪಾಧ್ಯಾಯರ ನೇತೃತ್ವದ ವಾಟ್ಸಪ್ ಗ್ರೂಪಿನ‌ ಸದಸ್ಯರು ಲೋಕ ಹಿತಕ್ಕಾಗಿ ಪ್ರಾರ್ಥಿಸಿ ಬುಧವಾರ ನೀಲಾವರ ಗೋಶಾಲೆಯಲ್ಲಿ 33 ಗೋದಾನ ಸೇವೆ, 33 ಗೋಗ್ರಾಸ ಸಮರ್ಪಣೆ, 33 ಬಾರಿ ಪವಮಾನ ಸೂಕ್ತ, ಗೋಸೂಕ್ತ ಹಾಗೂ ಶ್ರೀ ಹರಿವಾಯುಸ್ತುತಿ ಪಾರಾಯಣ ಸಹಿತ ಕಾಲೀಯ ಕೃಷ್ಣ ಮುಖ್ಯಪ್ರಾಣ ದೇವರಿಗೆ ಮಧು ಅಭಿಷೇಕ ನಡೆಸಿ ಗಮನ ಸೆಳೆದಿದ್ದಾರೆ.

ಅದರ ಜೊತೆಗೆ ಸದಸ್ಯರು ಯಕ್ಷ ಭಜನೆ, ಭಜನಾ ಸಂಕೀರ್ತನೆ ನಡೆಸಿ ದೇವರಿಗೆ ಅರ್ಪಿಸಿದರು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು, ಯುವಕರ ಈ ವಿಶೇಷ ಸೇವೆಯಿಂದ ಅಧಿಕ ಮಾಸ ನಿಯಾಮಕನಾದ ಶ್ರೀ ಪುರುಷೋತ್ತಮ ಮಹಾವಿಷ್ಣುವಿನ ಕೃಪೆ ಸಮಸ್ತ ಲೋಕಕ್ಕೆ ಲಭಿಸಲಿ, ಗೋವಿನ ಕುಲಕ್ಕೆ ಮಂಗಲವಾಗಲಿ. ಸಾಮಾಜಿಕ ಜಾಲತಾಣಗಳನ್ನು ಇಂಥಹ ಸತ್ಕರ್ಮಗಳಿಗೆ ಬಳಸುವ ಮೂಲಕ ಈ ತಂಡದ ಯುವಕರು ಮಾದರಿಯಾಗಿದ್ದಾರೆ. ತಂಡದ ಎಲ್ಲ ಸದಸ್ಯರನ್ನೂ ಭಗವಂತನು ಅನುಗ್ರಹಿಸಲಿ ಎಂದು ಸಂದೇಶ ನೀಡಿದರು .