ವೆನ್‍ ಲಾಕ್ ಆಸ್ಪತ್ರೆಯಲ್ಲಿ ಶಾಖಾಘಾತ ಚಿಕಿತ್ಸೆಗೆ ವಿಶೇಷ 10 ಹಾಸಿಗೆಗಳ ಘಟಕ

ಮಂಗಳೂರು: ಕರಾವಳಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ಪರಿಣಾಮವಾಗಿ ಶಾಖಾಘಾತ (Heat Stroke) ಪ್ರಕರಣಗಳು ಹೆಚ್ಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸಿದ್ಧತೆ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಹೊಸ ಶಸ್ತ್ರಚಿಕಿತ್ಸಾ ಬ್ಲಾಕ್‌ನ 5ನೇ ಮಹಡಿಯಲ್ಲಿ ಶಾಖಾಘಾತ ರೋಗಿಗಳ ಚಿಕಿತ್ಸೆಗೆ 10 ಹಾಸಿಗೆಗಳ ವಿಶೇಷ ಘಟಕವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕರು ತಿಳಿಸಿದ್ದಾರೆ.

ಶಾಖಾಘಾತ ಎಂದರೇನು?

ಶಾಖಾಘಾತವು ಜೀವಕ್ಕೆ ಅಪಾಯಕಾರಿ ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ದೇಹದ ಉಷ್ಣತೆ 104°F (40°C) ಅಥವಾ ಅದಕ್ಕಿಂತ ಹೆಚ್ಚು ಏರಿದಾಗ ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆ ವಿಫಲವಾಗುತ್ತದೆ. ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ಜೀವಾಪಾಯ ಸಂಭವಿಸಬಹುದು.

ಶಾಖಾಘಾತದ ಪ್ರಮುಖ ಲಕ್ಷಣಗಳು

ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು

  • ದೇಹದ ಉಷ್ಣತೆ 104°F (40°C) ಕ್ಕಿಂತ ಹೆಚ್ಚಾದಾಗ
  • ಗೊಂದಲ ಅಥವಾ ತೊದಲು ಮಾತು
  • ಪ್ರಜ್ಞೆ ತಪ್ಪುವುದು
  • ಬಿಸಿ ಹಾಗೂ ಒಣ ಚರ್ಮ
  • ಅತಿಯಾಗಿ ಬೆವರುವುದು
  • ವೇಗವಾದ ಹೃದಯ ಬಡಿತ

ಶಾಖಾಘಾತಕ್ಕೆ ತಕ್ಷಣದ ಪ್ರಥಮ ಚಿಕಿತ್ಸೆ

ಶಾಖಾಘಾತ ಕಂಡುಬಂದ ತಕ್ಷಣ ದೇಹವನ್ನು ತಂಪಾಗಿಸುವುದು ಅತ್ಯಂತ ಮುಖ್ಯ. ಈ ಕ್ರಮಗಳನ್ನು ಅನುಸರಿಸಬಹುದು:

  • ವ್ಯಕ್ತಿಯನ್ನು ನೆರಳು, ಎಸಿ ಕೊಠಡಿ ಅಥವಾ ತಂಪಾದ ಸ್ಥಳಕ್ಕೆ ಕರೆದೊಯ್ಯಿರಿ
  • ಸಾಧ್ಯವಾದರೆ ತಣ್ಣೀರಿನ ಟಬ್‌ನಲ್ಲಿ ಮುಳುಗಿಸಿ
  • ದೇಹದ ಮೇಲೆ ನೀರು ಸಿಂಪಡಿಸಿ
  • ತಣ್ಣೀರಿನಲ್ಲಿ ನೆನೆಸಿದ ಟವೆಲ್ ಅಥವಾ ಹಾಳೆ ಹೊದಿಸಿ
  • ಕಂಕುಳು, ಕುತ್ತಿಗೆ, ಬೆನ್ನು ಮತ್ತು ತೊಡೆಸಂದು ಭಾಗಕ್ಕೆ ಐಸ್ ಪ್ಯಾಕ್ ಇಡಿ
  • ಫ್ಯಾನ್ ಬಳಸಿ ದೇಹ ತಂಪಾಗಲು ಸಹಾಯಮಾಡಿ
  • ವ್ಯಕ್ತಿ ಎಚ್ಚರದಲ್ಲಿದ್ದರೆ ತಣ್ಣೀರು ಅಥವಾ ORS ಪಾನೀಯ ನೀಡಿ
  • ಮದ್ಯ ಅಥವಾ ಕೆಫೀನ್ ಇರುವ ಪಾನೀಯ ನೀಡಬೇಡಿ
  • ಬಿಗಿಯಾದ ಬಟ್ಟೆಗಳನ್ನು ಸಡಿಲಗೊಳಿಸಿ

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಆರೋಗ್ಯ ಸಲಹೆಗಳು

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಜ್ಞರು ನೀಡಿರುವ ಸಲಹೆಗಳು:

  • ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು, ಎಳನೀರು ಮತ್ತು ORS ಸೇವಿಸಿ
  • ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಹೊರಾಂಗಣ ಚಟುವಟಿಕೆಗಳನ್ನು ಮಿತಿಗೊಳಿಸಿ
  • ಹಗುರವಾದ, ಸಡಿಲ ಹಾಗೂ ತಿಳಿ ಬಣ್ಣದ ಹತ್ತಿ ಬಟ್ಟೆ ಧರಿಸಿ
  • ಹೊರಗೆ ಕೆಲಸ ಮಾಡುವಾಗ ಆಗಾಗ್ಗೆ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ
  • ಮಕ್ಕಳು, ವೃದ್ಧರು ಹಾಗೂ ಸಾಕುಪ್ರಾಣಿಗಳನ್ನು ನಿಲ್ಲಿಸಿದ ಕಾರಿನಲ್ಲಿ ಬಿಡಬೇಡಿ
  • ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆ ಇರುವವರ ಆರೋಗ್ಯದ ಮೇಲೆ ವಿಶೇಷ ಗಮನಹರಿಸಿ

ತುರ್ತು ಸಹಾಯವಾಣಿ ಸಂಖ್ಯೆಗಳು

ತುರ್ತು ಪರಿಸ್ಥಿತಿಯಲ್ಲಿ ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು:

7483035127, 8217662885, 9945927253, 9167607879

ತುರ್ತು ಅಂಬುಲೆನ್ಸ್ ಸೇವೆಗಾಗಿ 108 ಗೆ ಕರೆ ಮಾಡಬಹುದು.