ಕೆಲಸದಲ್ಲಿ ವಿಳಂಬವಾಗುವುದೂ ಭ್ರಷ್ಟಾಚಾರ: ಸುನಿಲ್ ಕುಮಾರ್

ಕಾರ್ಕಳ : ಸರಕಾರಿ ನೌಕರರು ಜನಸೇವೆ ಮಾಡಲು ಹಣ ಪಡೆದುಕೊಂಡರೆ ಅದು ಭ್ರಷ್ಟಾಚಾರ. ಜತೆಗೆ ಕರ್ತವ್ಯದ ಕೆಲಸ ವಿಳಂಬವಾಗಿ ಮಾಡಿದರೂ ಭ್ರಷ್ಟಾಚಾರಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದಂತೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಅವರು ಹೇಳಿದರು.
ಬೆಳ್ಮಣ್ ಜಿ.ಪಂ. ಕ್ಷೇತ್ರದ ಪಿಡಿಒ, ಗ್ರಾಮ ಲೆಕ್ಕಿಗರ ಹಾಗೂ ಇತರ ಪಂಚಾಯತ್ ಸಿಬಂದಿಗೆ ಡಿ. ೨೫ರಂದು ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ಪುನಶ್ಚೇತನ ಕಾರ್ಯಗಾರದಲ್ಲಿ ಅವರು ಮಾತನಾಡಿದರು.


ಸರಕಾರಿ ನೌಕರರು ತಾವು ಮಾದರಿಯಾಗಿ, ಯಶಸ್ವಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದೆವೆಯೆ? ಎನ್ನುವುದನ್ನು ಯೋಚನೆ ಮಾಡಬೇಕು. ಫಲಾನುಭವಿಗಳು ಬಂದಾಗ ನಗುಮುಖದಿಂದ ಮಾತನಾಡಿಸಿ, ಜನರಿಗೆ ಸೇವೆ ನೀಡಬೇಕು. ಕೆಲಸದಲ್ಲಿ ಪ್ರತಿಯೊಬ್ಬರಿಗೂ ಇಂದು ಒತ್ತಡವಿದೆ. ಆ ಒತ್ತಡದ ನಡುವೆಯೂ ಒಳ್ಳೆಯ ಆಡಳಿತ, ಸೇವೆ ಹೇಗೆ ನೀಡಬಹುದು ಎನ್ನುವುದನ್ನು ಯೋಚಿಸಬೇಕಾಗುತ್ತದೆ ಎಂದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬೆಳ್ಮಣ್ ಜಿ.ಪಂ. ಸದಸ್ಯೆ ರೇಶ್ಮಾ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿದರು.

ತಹಸೀಲ್ದಾರ್ ಮಹಮ್ಮದ್ ಇಸಾಕ್, ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ತರಬೇತುದಾರರಾದ ಸತೀಶ್ ಭಟ್ ಬಿಳಿನೆಲೆ, ಸತೀಶ್ ಪೂಜಾರಿ, ವಾರಿಜಾ ಸಾಲ್ಯಾನ್, ಸಬಿತಾ ಪೂಜಾರಿ ಇದ್ದರು.

ಉದ್ಘಾಟನಾ ಸಮಾರಂಭ:

ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ, ಜಿ.ಪಂ. ಸದಸ್ಯರಾದ ಸುಮಿತ್ ಶೆಟ್ಟಿ, ಜ್ಯೋತಿ ಹರೀಶ್, ತಾ.ಪಂ. ಸದಸ್ಯರಾದ ಪುಷ್ಪಾ ಸತೀಶ್, ವಿದ್ಯಾ, ಹರೀಶ್ಚಂದ್ರ ಉಪಸ್ಥಿತರಿದ್ದರು.