ಮುಂಬೈ: ಅದೊಂದು ಕಾಲವಿತ್ತು, ಸಿನಿಮಾ ರಂಗ ಎಂದರೆ ಹಿಂದಿ ಭಾಷೆಗಳ ಚಿತ್ರ ನಿರ್ಮಾಣ ಮಾಡುವ ಬಾಲಿವುಡ್ ಮಾತ್ರ ಎನ್ನಲಾಗುತ್ತಿತ್ತು. ಬಾಲಿವುಡ್ ಎಂದರೆ ಬಾಯಿ ಬಾಯಿ ಬಿಡುತ್ತಿದ್ದ ಕಾಲವದು. ಬಾಲಿವುಡ್ಡಿನ ಏಕಚಕ್ರಾಧಿಪತ್ಯದಡಿ ಭಾರತೀಯ ಸಿನಿರಂಗದ ಅದೆಷ್ಟೋ ಭಾಷೆಗಳ ಉತ್ತಮ ಚಿತ್ರಗಳೂ ಮಸುಕಾಗಿರುತ್ತಿದ್ದವು. ಆದರೆ ಈಗ ಎಲ್ಲವೂ ತಲೆಕೆಳಗು. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಒಟ್ಟಾರೆಯಾಗಿ ಹೇಳುವುದಾದರೆ ಅಖಂಡ ದಕ್ಷಿಣ ಭಾರತದ ‘ಸೌತ್ ವುಡ್’ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಸಿನಿಮಾರಂಗದ ‘ಬಾದಶಹಾ’ ಎಂದು ಮೆರೆಯುತ್ತಿದ್ದ ಬಾಲಿವುಡ್ ಬೆಚ್ಚಿಬಿದ್ದಿದೆ.
ಒಂದೆಡೆ ಪ್ರಖರ ರಾಷ್ಟ್ರವಾದಿಗಳ “ಬಾಯ್ ಕಾಟ್ ಬಾಲಿವುಡ್” ಟ್ರೆಂಡ್ ನಡಿ ಅಪ್ಪಚ್ಚಿಯಾಗಿರುವ ಬಾಲಿವುಡ್ ನ ಘಟಾನುಘಟಿ ನಟರಾದ ಅಮೀರ್, ಸಲ್ಮಾನ್, ಶಾರೂಖ್, ಅಕ್ಷಯ್, ರಣ್ ಬೀರ್, ಹೃತಿಕ್ ಮುಂತಾದವರ ಸಿನಿಮಾಗಳು ನೆಲಕಚ್ಚಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ದಕ್ಷಿಣದ ಪ್ರಭಾಸ್, ಯಶ್, ಕಿಚ್ಚ ಸುದೀಪ್, ರಕ್ಷಿತ್, ಫಹಾದ್ ಫೈಸಲ್, ಅಲ್ಲು ಅರ್ಜುನ್, ಎನ್.ಟಿ.ಆರ್ ಮುಂತಾದ ನಟರ ಚಿತ್ರಗಳು ಗಲ್ಲಾಪೆಟ್ಟಿಗೆಯನ್ನು ಚಿಂದಿ ಉಡಾಯಿಸಿ ಭಾರತ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಧೂಳೆಬ್ಬಿಸುತ್ತಿವೆ.
ಇತ್ತೀಚೆಗೆ ಬಿಡುಗಡೆಯಾದ ಕಾರ್ತಿಕೇಯ-2 ಚಿತ್ರಕ್ಕೆ ಗಡಿರೇಖೆಗಳ ಬೇಧವಿಲ್ಲದೆ ಇಡೀ ಭಾರತವೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾವು ಎಲ್ಲಾ ಥಿಯೇಟರ್ ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆಗಸ್ಟ್ 13 ರಂದು ಬಿಡುಗಡೆಯಾದ ಚಂದೂ ಮೊಂಡೇಟಿ ಬರೆದು ನಿರ್ದೇಶಿಸಿರುವ, ನಿಖಿಲ್ ಸಿದ್ಧಾರ್ಥ ನಟನೆಯ ಚಿತ್ರ ವಿಶ್ವದಾದ್ಯಂತ 75.33 ಕೋಟಿ ರೂ ಬಾಚಿಕೊಂಡಿದೆ.
Thank You🙏🏽 Indian Movie Lovers ki 🙏🏽🙏🏽🙏🏽🔥 #Karthikeya2 #Karthikeya2Hindi pic.twitter.com/CL7a5Uuthj
— Nikhil Siddhartha (@actor_Nikhil) August 22, 2022
ದಕ್ಷಿಣದ ಸಿನಿಮಾಗಳು ಉತ್ತರದಲ್ಲಿ ಧೂಳೆಬ್ಬಿಸುತ್ತಿರುವುದನ್ನು ಕಂಡು ಬಾಲಿವುಡ್ ದಂಗಾಗಿದೆ. ಅದರ ನಡುವೆ ಎಡೆಬಿಡದೆ ಕಾಡುತ್ತಿರುವ ಬಾಯ್ ಕಾಟ್ ಬಾಲಿವುಡ್ ಟ್ರೆಂಡ್ ನಿಂದಾಗಿ ಹಲವಾರು ಚಿತ್ರಗಳು ಬಿಡುಗಡೆಗೆ ಹಿಂದೇಟು ಹಾಕುತ್ತಿವೆ. ಇನ್ನು ಕೆಲವು ಸಿನಿಮಾಗಳ ಚಿತ್ರಕಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎನ್ನುವ ಗುಲ್ಲು ಸಿನಿರಂಗದ ಪಡಸಾಲೆಯಲ್ಲಿ ಹಬ್ಬಿದೆ. ಪರಿಸ್ಥಿತಿ ಹೀಗೆಯೆ ಮುಂದುವರಿದಲ್ಲಿ ಒಂದು ಕಾಲದಲ್ಲಿ ಮೆರೆದಾಡಿದ್ದ ಬಾಲಿವುಡ್ ಬೀದಿಗೆ ಬೀಳುವುದಂತೂ ನಿಶ್ಚಿತ ಎಂದು ಸಿನಿ ಪ್ರೇಕ್ಷಕ ಲೊಟಗುಟ್ಟುತ್ತಿದ್ದಾನೆ.