ಸೋನಿ ಇಂಡಿಯಾ ತೆಕ್ಕೆಗೆ ZEE ಎಂಟರ್‌ಟೇನ್‌ಮೆಂಟ್.!

ಮುಂಬೈ: ಭಾರತದ ಅತಿದೊಡ್ಡ ಮನರಂಜನಾ ಜಾಲ ಹೊಂದಿರುವ ಟಿವಿ ಮಾಧ್ಯಮ ‘ಝೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮೆಟೆಡ್ ಸಂಸ್ಥೆ’ಯನ್ನು ಸೋನಿ ಇಂಡಿಯಾ ಕಾರ್ಪ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮಂಡಳಿಯು ವಿಲೀನ ಪ್ರಕ್ರಿಯೆಗೆ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಜೀ ಎಂಟರ್‌ಟೈನ್ಮೆಂಟ್‌ ತಿಳಿಸಿದೆ.

ಜೀ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡುವಂತೆ ಪ್ರಮುಖ ಹೂಡಿಕೆದಾರರು ಒತ್ತಡ ಹೇರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುನೀತ್‌ ಗೋಯೆಂಕಾ ಅವರನ್ನು ಮಂಡಳಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಹೊಸ ಒಪ್ಪಂದದಂತೆ ಸೋನಿ ಇಂಡಿಯಾ ಶೇ 53ರಷ್ಟು ಪಾಲು ಹೊಂದಲಿದ್ದು, ಮಿಕ್ಕಿದ್ದು ಝೀ ಪಾಲಾಗಲಿದೆ. ಜೊತೆಗೆ ಝೀ ಸಂಸ್ಥೆಯಲ್ಲಿ ಸೋನಿ ಇಂಡಿಯಾ ಸರಿ ಸುಮಾರು 1.58 ಬಿಲಿಯನ್ ಡಾಲರ್ ಮೊತ್ತ ಹೂಡಿಕೆ ಮಾಡಲಿದೆ. ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳನ್ನು ಸೋನಿ ಇಂಡಿಯಾದಿಂದಲೇ ನೇಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ವಿಲೀನ ಪ್ರಕ್ರಿಯೆ ಸುಮಾರು 90 ದಿನಗಳ ಮಟ್ಟಿಗೆ ನಡೆಯಲಿದ್ದು, ಈ ಅವಧಿಯಲ್ಲಿ ಉಭಯ ಸಂಸ್ಥೆಗಳ ಪ್ರತಿನಿಧಿಗಳು ಹಲವು ಒಪ್ಪಂದ, ನಿಯಮಾವಳಿಗಳಿಗೆ ಸಹಿ ಹಾಕಲಿದ್ದಾರೆ. ಝೀ ಕಾರ್ಯಕಾರಿ ಅಧಿಕಾರಿ ಪುನೀತ್ ಗೊಯೆಂಕಾ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಯತ್ನಿಸಲಾಗಿತ್ತು. ಆದರೆ, ಸದ್ಯಕ್ಕೆ ಸಂಸ್ಥೆ ಮುನ್ನಡೆಸುವ ಹೊಣೆ ಅವರ ಹೆಗಲಿಗೆ ಹಾಕಲಾಗಿರುವುದು ವಿಶೇಷ.

1992ರಲ್ಲಿ ಸಂಸ್ಥೆ ಹುಟ್ಟು ಹಾಕಿದ ಸುಭಾಷ್ ಚಂದ್ರ ಅವರ ಕುಟುಂಬಸ್ಥರು ಸಂಸ್ಥೆ ಮೇಲೆ ನಿಧಾನವಾಗಿ ಹಿಡಿತ ಕಳೆದುಕೊಳ್ಳುತ್ತಿದ್ದು, ಪುನೀತ್ ನಿರ್ಗಮನದಿಂದ ಇನ್ನಷ್ಟು ಅಂತರ ಉಂಟಾಗುತ್ತಿತ್ತು. ಸದ್ಯಕ್ಕೆ ಇಬ್ಬರು ಬೋರ್ಡ್ ಸದಸ್ಯರು ಸಂಸ್ಥೆ ತೊರೆದಿದ್ದಾರೆ.
ವಿಲೀನ ಪ್ರಕ್ರಿಯೆ ಸುದ್ದಿ ಹೊರ ಬರುತ್ತಿದ್ದಂತೆ ಜೀ ಎಂಟರ್‌ಟೈನ್ಮೆಂಟ್‌ ಷೇರು ಬೆಲೆ ಶೇ 21.76ರಷ್ಟು (55.65 ರೂಪಾಯಿ) ಏರಿಕೆಯಾಗಿ ₹ 311.35ರಲ್ಲಿ ವಹಿವಾಟು ನಡೆದಿದೆ.

ಉಭಯ ಸಂಸ್ಥೆಗಳು ಒಪ್ಪಂದ ಅಂತಿಮಗೊಳಿಸಲು 90 ದಿನಗಳ ಅವಧಿ ಇರುತ್ತದೆ. ವಿಲೀನಗೊಂಡ ಸಂಸ್ಥೆಯು ಭಾರತದ ಷೇರುಪೇಟೆಯಲ್ಲಿ ಸಾರ್ವಜನಿಕ ವಹಿವಾಟಿಗೆ ತೆರೆದುಕೊಳ್ಳಲಿದೆ. ವಿಲೀನ ಪ್ರಕ್ರಿಯೆಯ ಪ್ರಸ್ತಾಪವನ್ನು ಅನುಮತಿಗಾಗಿ ಷೇರುದಾರರ ಮುಂದಿಡಲಾಗುತ್ತದೆ ಎಂದು ಜೀ ಸಂಸ್ಥೆ ಹೇಳಿದೆ.