ಸೋನಿಯಾಗಾಂಧಿ ರಾಜ್ಯಸಭೆಗೆ; ಪ್ರಿಯಾಂಕಾಗೆ ರಾಯಬರೇಲಿ? ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಲೆಕ್ಕಾಚಾರ

ನವದೆಹಲಿ: ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಐದು ವರ್ಷಗಳ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ತಾಯಿ ಸೋನಿಯಾ ಗಾಂಧಿ ದಶಕಗಳಿಂದ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಲೋಕಸಭೆಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾಗಾಂಧಿ ಬಹುತೇಕ ರಾಜಸ್ಥಾನದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸಜ್ಜಾಗುತ್ತಿದ್ದು, 77 ವರ್ಷದ ಸೋನಿಯಾ ಗಾಂಧಿಗೆ ರಾಜಸ್ಥಾನ ಸುರಕ್ಷಿತ ಸ್ಥಾನ ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ ಹೋದರೆ, ಹಿಮಾಚಲ ಪ್ರದೇಶದ ಏಕೈಕ ಸ್ಥಾನಕ್ಕೆ ಪಕ್ಷದಿಂದ ಸೋನಿಯಾ ಗಾಂಧಿ ಅವರನ್ನು ನಾಮನಿರ್ದೇಶನ ಮಾಡಬಹುದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸೋನಿಯಾ ಗಾಂಧಿ ರಾಜ್ಯಸಭೆಗೆ ಪ್ರವೇಶಿಸಿದರೆ, ಪ್ರಿಯಾಂಕಾ ವಾದ್ರಾ ರಾಯ್ ಬರೇಲಿಯಿಂದ ಸ್ಪರ್ಧಿಸಬಹುದು ಎನ್ನಲಾಗಿದೆ. 2019 ರಲ್ಲಿ ಚುನಾವಣಾ ಕಣದಿಂದ ಹೊರಗುಳಿಯಲು ಪ್ರಿಯಾಂಕಾ ಬಯಸಿದ್ದರೂ, 2024 ರ ಚುನಾವಣೆಯಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಲು ನೋಡುತ್ತಿರುವ ಕಾರಣ ಪಕ್ಷವು ಈ ಬಾರಿ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.