ಉಡುಪಿ: ಇಂದು ಸೌರಮಾನ ಯುಗಾದಿ. ಉಡುಪಿ ಜಿಲ್ಲೆಯಲ್ಲಿ ವೈದಿಕ ಮತ್ತು ಜನಪದ ಸಂಪ್ರದಾಯದಂತೆ ಈ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯ್ತು. ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಪಂಚಾಂಗ ಶ್ರವಣ, ಮಹೋತ್ಸವ ಜರುಗಿತು.
ಉಡುಪಿಯಲ್ಲಿ ಸೌರಮಾನ ಪದ್ಧತಿಯಂತೆ ಯುಗಾದಿ ಆಚರಿಸಲಾಯ್ತು. ಕೃಷ್ಣ ದೇವರ ಮಠದಲ್ಲಿ ಜ್ಯೋತಿಷ್ಯರ ಮೂಲಕ ವರ್ಷದ ಗ್ರಹಗತಿಗಳನ್ನು ತಿಳಿಯಲು ಭಕ್ತಗಣ ಉತ್ಸುಕತೆಯಿಂದ ಭಾಗವಹಿಸಿದ್ದರು.

ಕೃಷ್ಣ ದೇವರ ಸಮ್ಮುಖದಲ್ಲಿರುವ ಚಂದ್ರಶಾಲೆಯಲ್ಲಿ ಪುರೋಹಿತರಾದ ಸುದರ್ಶನ ಆಚಾರ್ಯರು ಪಂಚಾಂಗ ಶ್ರವಣ ನಡೆಸಿದರು. ಅಷ್ಟಮಠಾಧೀಶರು ಭಕ್ತರ ಜೊತೆ ಕುಳಿತು ವರ್ಷದ ಗ್ರಹಗತಿಗಳನ್ನು ಕೇಳಿದರು.

ಉಡುಪಿ ಪಂಚಾಂಗಕ್ಕೆ ದೇಶದಲ್ಲೇ ವಿಶೇಷ ಮಾನ್ಯತೆಯಿದೆ. ಕೃಷ್ಣಮಠದ ಆಸ್ಥಾನದ ವಿದ್ವಾಂಸರ ಮೂಲಕ ನಡೆಯುವ ಈ ಪಂಚಾಂಗ ಪಠಣಕ್ಕೆ ಶತಮಾನಗಳ ಇತಿಹಾಸ ಇದೆ. ಈ ಬಾರಿ ಶೀರೂರು, ಪೇಜಾವರ, ಕೃಷ್ಣಾಪುರ, ಕಾಣಿಯೂರು ಮಠಾಧೀಶರು ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಭಾಗಿಯಾದರು.ಪಂಚಾಂಗ ಪಠಣದ ಬಳಿಕ ರಥಬೀದಿಯಲ್ಲಿ ಸುವರ್ಣ ರಥೋತ್ಸವವು ನಡೆಯಿತು. ದಿವಾನರಾದ ಡಾ. ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು.




















