ಕೋಲಾರ: ದೇವರ ಉತ್ಸವದಲ್ಲಿ 14 ವರ್ಷದ ದಲಿತ ಬಾಲಕನೊಬ್ಬ ಉತ್ಸವ ಮೂರ್ತಿಯನ್ನು ಮುಟ್ಟಿದ ಎಂಬ ಕಾರಣಕ್ಕೆ ಆತನನ್ನು ಥಳಿಸಿ, ಆತನ ಕುಟುಂಬಕ್ಕೆ 60 ಸಾವಿರ ರೂಗಳ ದಂಡ ವಿಧಿಸಿರುವ ಘಟನೆ ಕೋಲಾರ ತಾಲೂಕಿನ ಟೇಕಲ್ ಬಳಿಯ ಉಳ್ಳೇರ ಹಳ್ಳಿಯಲ್ಲಿ ನಡೆದಿತ್ತು.
ಭೂತಮ್ಮನ ಮೂರ್ತಿ ಉತ್ಸವದ ವೇಳೆ ಕೆಳಕ್ಕೆ ಬಿದ್ದ ದೇವರನ್ನು ಹೊರುವ ಗುಜ್ಜ ಕೋಲನ್ನು ದಲಿತ ಬಾಲಕನೊಬ್ಬ ಎತ್ತಿಕೊಟ್ಟಿದ್ದಕ್ಕೆ ಸಿಟ್ಟಾದ ಕೆಲವರು ಉತ್ಸವ ಮೂರ್ತಿಯನ್ನು ಮುಟ್ಟಿದ ಎಂದು ಆತನನ್ನು ಥಳಿಸಿದ್ದರು. ಬಾಲಕನ ಕುಟುಂಬಕ್ಕೆ 60 ಸಾವಿರ ರೂಗಳ ದಂಡ ವಿಧಿಸಿ ಅ.1 ರೊಳಗೆ ದಂಡ ಕಟ್ಟಲು ತಾಕೀತು ಮಾಡಿದ್ದರು. ದಂಡ ಕಟ್ಟದಿದ್ದಲ್ಲಿ ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡಿದ್ದರು.
ಪ್ರಕರಣದ ಬಗ್ಗೆ ಮಾಹಿತಿ ಪಡೆದ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತ್ರಸ್ತ ಬಾಲಕನ ಮನೆಗೆ ಭೇಟಿ ನೀಡಿದ್ದಾರೆ. ಬಾಲಕನ ಉನ್ನತ ಶಿಕ್ಷಣದವರೆಗೂ ಸರ್ಕಾರದ ವತಿಯಿಂದ ಉಚಿತ ವಿದ್ಯಾಭ್ಯಾಸ, ಕುಟುಂಬಕ್ಕೆ ಉಚಿತ ಜಮೀನು ಮಂಜೂರಾತಿ ಮತ್ತು ಮನೆ ನಿರ್ಮಾಣಕ್ಕೆ 5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿರುವ ಸಚಿವರು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.