udupixpress
Home Trending ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಸರವೆಂದರೆ ಭಾರೀ "ಸ್ನೇಹ" ಎಳೆಯ ಕಂಗಳಿಗೆ ಪರಿಸರ ಪಾಠ ಮಾಡ್ತಿದೆ ಸುಳ್ಯದ ಸ್ನೇಹ...

ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಸರವೆಂದರೆ ಭಾರೀ “ಸ್ನೇಹ” ಎಳೆಯ ಕಂಗಳಿಗೆ ಪರಿಸರ ಪಾಠ ಮಾಡ್ತಿದೆ ಸುಳ್ಯದ ಸ್ನೇಹ ಶಾಲೆ

ನಮಗೋಸ್ಕರ ಶುದ್ದ ಗಾಳಿ, ನೀರು, ಬದುಕು ನೀಡುವ ಪರಿಸರವನ್ನು ಕಾಪಾಡದಿದ್ದರೆ ನಮಗೆ ಬದುಕೇ ಇಲ್ಲ. ನಮಗೆ ಎಲ್ಲದ್ದಕ್ಕೂ ಪರಿಸರ ಬೇಕು. ಆದರೆ ಪರಿಸರವನ್ನು ಪ್ರೀತಿಸುವುದರಲ್ಲಿ ನಾವು ಹಿಂದೇಟು ಹಾಕುತ್ತಿದ್ದೇವೆ. ಅದರಲ್ಲೂ ಪರಿಸರ ಶಿಕ್ಷಣ ಕೊಡಬೇಕಾದ ಶಿಕ್ಷಣ ಸಂಸ್ಥೆಗಳು, ಪರಿಸರ ದಿನಕ್ಕೊಮ್ಮೆ ಗಿಡ ನೆಟ್ಟು ಆಮೇಲೆ ಪರಿಸರ ಪ್ರೀತಿಯನ್ನೇ ಮರೆತುಬಿಡುತ್ತವೆ.

ಆದರೆ ಇಲ್ಲೊಂದು ಅಪರೂಪದ ಶಿಕ್ಷಣ ಸಂಸ್ಥೆ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿದೆ. ಆ ಮೂಲಕ ಪರಿಸರ ರಕ್ಷಣೆಗೆ ಸತತ ಹೆಗಲು ಕೊಡುತ್ತಲೇ ಇದೆ.

ಈ ಶಾಲೆ ಹೆಸರೇ ಸ್ನೇಹ ಶಾಲೆ. ಸ್ನೇಹಿತರೇ ಸೇರಿ ಕಟ್ಟಿದ ಶಾಲೆಯಿದು.  ಹಾಗಾಗಿ ಸ್ನೇಹ ಶಾಲೆ ಎಂದು ಹೆಸರಿಡಲಾಗಿದೆ. ಅಂದಹಾಗೆ ಈ ಶಾಲೆ ಇರುವುದು ದ.ಕ ಜಿಲ್ಲೆಯ ಸುಳ್ಯದ  ಹಚ್ಚ ಹಸುರಿನ ಪ್ರದೇಶದಲ್ಲಿ. ಸುತ್ತ ಮುತ್ತಲಿನ ಕಾಡಿನಿಂದಾವೃತ್ತವಾದ ಈ ಶಾಲೆಯ ಮಡಿಲಲ್ಲಿ ಹಸಿರ ತಂಪಿದೆ, ಇದು ಅನುದಾನರಹಿತ ಕನ್ನಡ ಶಾಲೆ. ಇಲ್ಲಿ ಕನ್ನಡದ ಕಂಪು ಎಷ್ಟಿದೆಯೋ, ಅಷ್ಟೇ ಪರಿಸರದ ಇಂಪು ಕೂಡ ಇದೆ.

ಪರಿಸರ ಶಾಲೆಯ ಮಡಿಲಲ್ಲಿ:

ಈ ಶಾಲೆಯನ್ನು ನೋಡುವುದೇ ಚೆಂದ. ಅಂಗಳದಲ್ಲಿರುವ ಗಿಡ ಮರಗಳು, ಅಲಂಕಾರಿಕ ಹೂವುಗಳು. ಶಾಲೆಯ ಸುತ್ತಲೂ ಹಸಿರ ಕಾಂಪೌಂಡ್ ಶಾಲೆಗೆ‌ ಶ್ರೀರಕ್ಷೆಯಾಗಿದೆ. ಇಲ್ಲಿ   ಔಷಧಿಯ ಸಸ್ಯಗಳನ್ನು ಬೆಳೆಸಿ ಔಷಧಗಳ ಗಿಡ ಮೂಲಿಕೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜೊತೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪರಿಸರ ಪಾಠದ ಜೊತೆಗೆ ಮರದ ತೊಗಟೆಯ ಕಷಾಯ ಮಾಡಿ ವಿತರಿಸಲಾಗುತ್ತಿದೆ.  ಶಾಲೆಯ ಸುತ್ತ ಮುತ್ತ ನೂರಕ್ಕೂ ಹೆಚ್ಚು ಔಷಧೀಯ ಗಿಡಗಳನ್ನು ನೆಡಲಾಗಿದೆ. ಆ ಮೂಲಕ ಪರಿಸರದಲ್ಲಿ ಅದೆಷ್ಟು ಔಷದೀಯ ಗುಣಗಳಿವೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ.

 

ಬೇಸಿಗೆ ಸಮಯದಲ್ಲಿ ಶಾಲೆಗೆ ನೀರಿನ ಕೊರತೆಯಾಗುತ್ತದೆ ಎನ್ನುವುದನ್ನು  ಮನಗಂಡ ಶಾಲಾ ಆಡಳಿತ ಮಂಡಳಿ, ಗುಡ್ಡದ ಸುತ್ತ ಮುತ್ತ ಲೂ ಇಂಗುಗುಂಡಿಗಳನ್ನು ತೋಡುವ ಏರ್ಪಾಡು ಮಾಡಿತು. ಈಗ ನೀರಿನ ಕೊರತೆ ಭಾದಿಸುತಿಲ್ಲ, ಜೊತೆಗೆ ಎಲ್ಲಾ ಗಿಡ-ಮರಗಳಿಗೂ ಬೇಸಗೆಯಲ್ಲಿ ನೀರು ಕೂಡ ಸಿಗುತ್ತಿದೆ.

ಗುಡ್ಡದ ಮೇಲಿನ ಶಾಲೆ ನಿತ್ಯಹರಿದ್ವರ್ಣದ ಶಾಲೆಯ ಕಂಪಿನಲ್ಲಿ ಬೆಳೆಯುತ್ತಿದೆ. ಇಂಗು ಗುಂಡಿಯಿಂದ ಪ್ರೇರಿತ ಗೊಂಡ ಶಾಲೆಯನ್ನು ನೋಡಲು ಅನೇಕ ಊರುಗಳಿಂದ ಜನರು ಬಂದು ಪುಳಕಿತರಾಗಿದ್ದಾರೆ. ಪರಿಸರದ ಗಿಡಮೂಲಿಕೆಗಳ ಪರಿಚಯಿಸುವ ಹಾಗೂ ಅಧ್ಯಯನಕ್ಕಾಗಿ ದಾಖಲೀಕರಣದ ಫ್ಲೆಕ್ಸ್ ಇಲ್ಲಿದೆ. ಶಾಲೆಯ ರಚನೆ ಪಿರಮಿಡ್ ಆಕಾರದಲ್ಲಿದ್ದು  ಸುಮಾರು 200 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಶಾಲೆಯ ಪ್ರತಿ ಮಕ್ಕಳ ಮನೆಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಗಿಡಗಳನ್ನು ನೆಡಲಾಗಿದೆ.‌

ಸ್ನೇಹ ಕನ್ನಡ ಶಾಲೆಯು 25 ವರ್ಷಗಳನ್ನು ಪೂರೈಸಿದೆ. ನಮಗೆ ಕನ್ನಡ ಉಳಿಸುವ ಕಾರ್ಯವೇ ಪ್ರೇರಣೆ, ಅದರ ಜೊತೆ ಪರಿಸರ ಕಾಳಜಿ ಕೂಡ ಶಾಲೆಗಿದೆ.  ಸುಳ್ಯ ತಾಲೂಕಿನ 7000 ಹೆಚ್ಚಿನ ಮಕ್ಕಳಿಗೆ ಪರಿಸರದ ಕಾಳಜಿ ಅರಿವು ಮೂಡಿಸಲಾಗುತ್ತಿದೆ ಎನ್ನುತ್ತಾರೆ ಶಾಲಾ ಮುಖ್ಯಸ್ಥರಾದ ಡಾ.ಚಂದ್ರಶೇಖರ್ ದಾಮ್ಲೆ

ಪರಿಸರ ಉಳಿಸುವಿಕೆಯ ಪಾಠದಿಂದ ಇಡೀ ರಾಜ್ಯಕ್ಕೆ ಮಾದರಿಯಾಗುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳಿಂದ ನಮ್ಮ ಪರಿಸರ ಮಾತೆ ಇನ್ನಷ್ಟು ಹಚ್ಚಹಸುರಾಗಲಿ ಎನ್ನುವುದು ನಮ್ಮ ಹಾರೈಕೆ

-ರಾಮ್  ಅಜೆಕಾರು ಕಾರ್ಕಳ

error: Content is protected !!