ನಿದ್ದೆ ಮಾಡೋದಕ್ಕೆ ಇರೋ ಈ ನಿಯಮ ಪಾಲಿಸಿದ್ರೆ ನೀ  ಗೆದ್ದೆ : ಸುಖವಾಗಿ ಮಲಗಲು ಇಲ್ಲಿದೆ ಟಿಪ್ಸ್

ಮಲಗಿದಾಗೆಲ್ಲಾ ನಿದ್ದೆ ಬರುತ್ತದೆಯೇ…? ಸಂತೆಯಲ್ಲೂ ಮಲಗಿದರೆ ನಿದ್ರಾದೇವಿ ಮುತ್ತಿಕೊಳ್ಳುತ್ತಾಳಾ? ಅಬ್ಬಾ ಈ ತರ ಮಲಗೋದು ಎಷ್ಟ್ ಮಜಾ ಅಲ್ವಾ, ಆಹಾ ನಿದ್ದೆ! ಅಂತ ಖುಷಿ ಪಡೋದಲ್ಲ ನೀವು,

ಹೊತ್ತು ಗೊತ್ತು ಇಲ್ಲದೇ ನಿದ್ದೆ ಮಾಡೋದು  ತಪ್ಪು ಅನ್ನುತ್ತೆ ಆಯುರ್ವೇದ.

ಸಾಮಾನ್ಯವಾಗಿ ಹಲವರು ಮಧ್ಯಾಹ್ನದ ಹೊತ್ತಲ್ಲಿ  ಗಡದ್ದಾಗಿ ನಿದ್ದೆ ಹೊಡಿಯುತ್ತಾರೆ. ಅದು ಕೂಡ ಆಯುರ್ವೇದದಲ್ಲಿ ನಿಷಿದ್ಧ ಅಂತಿದೆ. ಹಾಗಂತ ನೀವು ಕೂತು ಮಲಗಬಹುದಂತೆ ! ಆದ್ರೆ ಇದಕ್ಕೂ ಒಂದಷ್ಟು ನಿಯಮ ಫಾಲೋ ಮಾಡಿದ್ರೆ  ಬೆಸ್ಟ್.

ಮಲಗೋಕೂ ಇದೆ ರೂಲ್ಸು, ಇದನ್ನೊಮ್ಮೆ ಪಾಲ್ಸು:

ಗ್ರೀಷ್ಮ ಋತು (ಬೇಸಿಗೆ ಕಾಲ) ಒಂದನ್ನ ಹೊರತುಪಡಿಸಿ ಬೇರೆ ಕಾಲದಲ್ಲಿ ಮಧ್ಯಾಹ್ನದ ‌ಹೊತ್ತು ಮಲಗಬಾರದು. ಬೇಸಿಗೆಯಲ್ಲಿ ನಮ್ಮ ದೇಹವು ಕೊಂಚ ಹೆಚ್ಚು ಬಳಲಿರುತ್ತದೆ. ಸುಸ್ತು ಜಾಸ್ತಿ. ಹಾಗಾಗಿ ಬೇಸಿಗೆಯ ಮಧ್ಯಾಹ್ಯದ ನಿದ್ರೆ ಸರಿ. ಇತರ ಸಮಯದಲ್ಲಿ ಒಳ್ಳೆಯದಲ್ಲ. ಏಕೆಂದರೆ ಶರೀರದಲ್ಲಿ ಪಿತ್ತ ಕಫ ವರ್ಧನೆ ಆಗುತ್ತದೆ. ವಾತ, ರಕ್ತ, ಚರ್ಮ ಸಂಬಂಧಿತ ಖಾಯಿಲೆಗಳಿಗೆ, ಹೃದಯ ರೋಗಗಳಿಗೆ ವಿಪರೀತ ನಿದ್ದೆ ದಾರಿ ಆಗಬಹುದು. ಥೈರಾಯ್ಡ್ ಸಮಸ್ಯೆ ಮತ್ತು ಒಬಿಸಿಟಿ, ಅಂದರೆ ಹೊಟ್ಟೆ ಡುಬ್ಬಆಗುವುದಕ್ಕೆ ಇದೂ ಒಂದು ಕಾರಣ.

  • ರಾತ್ರಿ ನಿದ್ದೆ ಬಿಟ್ಟಿದ್ದರೆ ಮಧ್ಯಾಹ್ನ ಮಲಗಬಹುದು. ರಾತ್ರಿ ಎಷ್ಟು ಹೊತ್ತು ನಿದ್ದೆ ಬಿಟ್ಟಿರುತ್ತೀರೋ ಅದರ ಅರ್ಧದಷ್ಟು ಹೊತ್ತು ಮಧ್ಯಾಹ್ನದ ನಿದ್ರೆ ಸಾಕಂತೆ.ಉದಾಹರಣೆಗೆ ರಾತ್ರಿ ಆರು ಗಂಟೆ ನಿದ್ರೆ ಬಿಟ್ಟರೆ, ಮಧ್ಯಾಹ್ನದ ನಿದ್ರೆ ಮೂರು ಗಂಟೆ ಸಾಕು.
  • ಹೊಟ್ಟೆ ಸರಿಯಿಲ್ಲ, ಲೂಸ್ ಮೋಷನ್ ಅಂತಿದ್ದರೂ ಮಧ್ಯಾಹ್ನ ಮಲಗಬಹುದು.
  • ಇನ್ನು ಬೇಸಿಗೆ ಅಲ್ಲದೆ ಬೇರೆ ಕಾಲದ ಮಧ್ಯಾಹ್ನಗಳಲ್ಲೂ ಮಲಗಲೇಬೇಕು ಅಂತಾದರೆ ನೀವು ಕೂತು ನಿದ್ರಿಸಬಹುದು! ಹೌದು.ಈಸಿ ಚಯರ್ ನಲ್ಲಿ ಕೂತು ತಲೆಯಾನಿಸಿರಿ. ನಿದ್ದೆ ಬಂದರೆ ನಿದ್ರಿಸಿ. ಏಳಬೇಕೆನಿಸಿದರೆ ಕುಳಿತಲ್ಲೆ ಕಣ್ಣು ಬಿಟ್ಟರಾಯಿತು. ಸಂಜೆ ಲವಲವಿಕೆಯಿಂದಿರುತ್ತದೆ. ಒಟ್ಟಾರೆ ಇವಿಷ್ಟನ್ನು ನಿದ್ದೆ ಸೂತ್ರವನ್ನು ಪಾಲಿಸಿದರೆ ಆರೋಗ್ಯ ಆರಾಮಾಗಿರುತ್ತದೆ.
ಗಣಪತಿ ದಿವಾಣ