ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಸರ್ ಎಂ. ವಿಶ್ವೇಶ್ವರಯ್ಯನವರ ಆದರ್ಶ ಪ್ರತಿಫಲಿಸಲಿ: ಉಮೇಶ್ ಭಟ್

ಉಡುಪಿ: ಸರ್ ಎಂ. ವಿಶ್ವೇಶ್ವರಯ್ಯನವರು ನಾಡಿಗೆ ಸಮರ್ಪಿಸಿದ ಕೆಆರ್‍ಎಸ್ ಅಣೆಕಟ್ಟು ನಾವೀನ್ಯದ ಕ್ರಾಂತಿಕಾರಿ ಚಿಂತನೆಯಾಗಿದ್ದು ಪ್ರತಿಯೊಬ್ಬರ ನಡೆ, ನುಡಿ, ಬದುಕಿನ ಮೌಲ್ಯದಲ್ಲಿ ಸರ್ ಎಂವಿ ಪ್ರತಿಬಿಂಬಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಭಟ್ ಹೇಳಿದರು.

ಅವರು ಬ್ರಹ್ಮಗಿರಿಯ ಎಜಿಎ ಕಾಂಟಿಲಿವರ್‍ನಲ್ಲಿರುವ ಎ. ಜಿ. ಎಸೋಸಿಯೇಟ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಂಜಿನಿಯರ್ಸ್ ದಿನಾಚರಣೆಯಲ್ಲಿ ಮಾತನಾಡಿ, ನಿಗದಿತ ಸಮಯದೊಳಗೆ ಯಾವುದೇ ಯೋಜನೆ ಪೂರ್ಣಗೊಳ್ಳದಿದ್ದರೆ ಖರ್ಚು ಹೆಚ್ಚಲಿದೆ, ಸಾರ್ವಜನಿಕ ಯೋಜನೆಗಳಿಗೆ ಜನರ ತೆರಿಗೆ ಹಣ ಪೋಲಾಗುತ್ತದೆ. ಶಿಸ್ತು, ಕಠಿಣ ಪರಿಶ್ರಮ, ಶ್ರದ್ಧೆ, ಉತ್ಕೃಷ್ಟತೆ, ಬದ್ಧತೆ, ಪ್ರಾಮಾಣಿಕತೆ, ಸಮಯಬದ್ಧತೆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಮೂಲಭೂತ ಸೌಲಭ್ಯಕ್ಕೆ ವ್ಯಯಿಸುವ ಒಂದು ರೂಪಾಯಿ ಒಟ್ಟು ಆಂತರಿಕ ಉತ್ಪಾದನೆಗೆ(ಜಿಡಿಪಿ) ಮೂರು ರೂ. ಮೌಲ್ಯ ತಂದುಕೊಡುತ್ತದೆ ಎಂದರು.

ಕನ್ಸಲ್ಟಿಂಗ್ ಎಂಜಿನಿಯರ್ ರಾಜೇಶ್ ಶೇಟ್ ಅವರನ್ನು ಸನ್ಮಾನಿಸಲಾಯಿತು.

ಎಂ. ಡಿ. ಎಸೋಸಿಯೇಟ್ಸ್ ಕನ್ಸಲ್ಟಿಂಗ್ ಎಂಜಿನಿಯರ್ ಆ್ಯಂಡ್ ಬಿಲ್ಡರ್ ಎಂ. ಡಿ. ಗಣೇಶ್, ಎ. ಜಿ. ಎಸೋಸಿಯೇಟ್ಸ್ ಪಾಲುದಾರ ಯೋಗೀಶ್‍ಚಂದ್ರ ಧರ್, ಶೈಲೇಶ್ ಉಪಸ್ಥಿತರಿದ್ದರು.

ರಂಜಿತಾ ಪ್ರಾರ್ಥಿಸಿದರು. ಎ. ಜಿ. ಎಸೋಸಿಯೇಟ್ಸ್ ಪಾಲುದಾರ ಎಂಜಿನಿಯರ್ ಗೋಪಾಲ ಭಟ್ ಸ್ವಾಗತಿಸಿದರು. ಮಹೇಶ್ ಹಲ್ಸನಾಡ್ ದಿನದ ಮಹತ್ವ ತಿಳಿಸಿದರು. ಆರ್ಕಿಟೆಕ್ಟ್ ನೀತಿ ಹೆಗ್ಡೆ ಪ್ರಾಸ್ತಾವಿಕ ಮಾತನ್ನಾಡಿದರು. ಗ್ರೀಷ್ಮಾ ಧರ್ ವಂದಿಸಿದರು.