ಉಡುಪಿ: ರಾಜ್ಯದೆಲ್ಲೆಡೆ ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೆರೆ ಸಂತ್ರಸ್ತರಿಗೆ ಅವಶ್ಯಕವಿರುವ ವಸ್ತುಗಳನ್ನು ತಲುಪಿಸುವ ಕಾರ್ಯಕ್ಕೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿರುವುದನ್ನು ಅಭಿನಂದಿಸಿದರು.
ಉಡುಪಿ ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಎಸ್. ಪುಟ್ಟಣ್ಣ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಶ್ರೀ ಕೃಷ್ಣ ಜಯಂತಿಯನ್ನು ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸುವಂತೆ ಹಾಗೂ ಶ್ರೀ ಕೃಷ್ಣ ಜಯಂತಿ ಆಚರಣೆಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ಸಭೆಯಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ನಗರಸಭೆ ಪೌರಾಯುಕ್ತಆನಂದ್ ಕಲ್ಲೋಳಿಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಪೂರ್ಣಿಮ ವಂದಿಸಿದರು.