ಮೈಸೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ದೇಣಿಗೆ ನೀಡಿದ್ದಾರೆ. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಸರ್ಕಾರ ಸುಗಮವಾಗಿ ಆಡಳಿತ ಸಾಗುತ್ತಿರುವುದರಿಂದ ಅವರಿಗೆ, ಯಾವುದೇ ರೀತಿ ಆರೋಪ ಮಾಡಲು ಆಗುತ್ತಿಲ್ಲ. ಹಾಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ಸುಗಮವಾಗಿ, ದಕ್ಷವಾಗಿ ಹೋಗುತ್ತಿದೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಮಾತನಾಡಲೂ ಏನೂ ಉಳಿದಿಲ್ಲ. ಅದಕ್ಕೆ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ ಎಂದರು.