ಕಲೆಯ ಬಲದಿಂದ ಹೊಂಬೆಳಕ ಚೆಲ್ಲುತ್ತಿರುವ ವೈವಿಧ್ಯಮಯ ಕಲಾವಿದೆ ಶೃುತಿ ದಾಸ್

ಊರಿನ ಹೆಸರಿನಿಂದಾಗಿ ಅಲ್ಲಿರುವವರಿಗೆ ಮಹತ್ವತೆ ಇರುವುದುಂಟು. ಅಯೋಧ್ಯೆ, ಮಥುರಾ, ಮಿಥಿಲಾ, ಕಾಶಿ, ಉಜೈನಿ, ರಾಮೇಶ್ವರ, ಪಾಣಿಪತ್ ಮುಂತಾದ ಪ್ರದೇಶಗಳ ಜನರು ಊರುಗಳ ಪ್ರಸಿದ್ಧತೆಯಿಂದ ಗುರುತಿಸ್ಪಡುತ್ತಾರೆ. ಅವರುಗಳು ನಾವು ಇಂಥ ಊರಲ್ಲಿರುವುದು ಎಂದಾಗ ಕೇಳುಗರಿಗೆ ಏನೋ ಒಂದು ಪುಳಕ. ಕೇಳಿದವರ ಮನಸ್ಸು ವಾಯು ವೇಗದಲ್ಲಿ ಸಂಚರಿಸಿ ಆ ಊರುಗಳಿಗೆ ಸಂಬಂಧಿಸಿದ ಪೌರಾಣಿಕ, ಐತಿಹಾಸಿಕ ಮಹತ್ವವನ್ನು ಕಲ್ಪಿಸಿ ರೋಮಾಂಚನಗೊಳ್ಳುತ್ತದೆ.ಇದಕ್ಕೆ ತದ್ವಿರುದ್ಧವಾಗಿ ವಿಶಿಷ್ಟವಾದ ವ್ಯಕ್ತಿಗಳಿಂದಾಗಿ ಊರಿಗೆ ಮಹತ್ವ ಬಂದಿರುವುದನ್ನು ನಾವು ವರ್ತಮಾನ ಹಾಗೂ ಇತಿಹಾಸದಲ್ಲೂ ಕಾಣುತ್ತೇವೆ. ಕೆಲವು ಊರಿನ ಹೆಸರು ಕೇಳಿದಾಕ್ಷಣ ಅಲ್ಲಿಯ ವಿಶಿಷ್ಟ ವ್ಯಕ್ತಿಗಳು ನಮ್ಮ ಮನದಂಗಳದಲ್ಲಿ ವಿಹರಿಸುತ್ತಾರೆ. 

ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ‘ಕಾವಳಕಟ್ಟೆ’ ಎಂದಾಗ ಯಕ್ಷ ರಸಿಕರಿಗೆ ತಟ್ಟನೆ ನೆನಪಾಗುವುದು ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ದಿವಾಕರ್ ದಾಸ್ ಕಾವಳಕಟ್ಟೆ ಅವರುಗಳು. ದಿನೇಶ್ ಶೆಟ್ಟಿ ಅವರು ತೆಂಕುತಿಟ್ಟು ಯಕ್ಷಗಾನ ಕಲಾವಿದರಾಗಿ, ತಾಳಮದ್ದಲೆ ಅರ್ಥಧಾರಿಗಳಾಗಿ ಯಕ್ಷ ರಸಿಕರಿಗೆ ಪರಿಚಿತರು ಹಾಗೂ ಪ್ರಸಿದ್ಧರು. ದಿವಾಕರ್ ದಾಸ್ ಅವರೂ ಯಕ್ಷಗಾನ ಹವ್ಯಾಸಿ ಕಲಾವಿದರಾಗಿ, ಸ್ತ್ರೀ ವೇಷ ಪಾತ್ರಧಾರಿಯಾಗಿ ಮೂವತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಯಕ್ಷಗಾನದ ವೇಷಭೂಷಣಗಳ ತಯಾರಕರಾಗಿಯೂ ಖ್ಯಾತರು. ಇವರೇ ಶೃುತಿ ದಾಸ್ ಅವರ ಜನಕ. ಜಯಂತಿ ದಾಸ್ ಜನನಿ. ಶೃುತಿ ಅವರು ದಾಸ್ ದಂಪತಿಗಳ ಪ್ರಥಮ ಪುತ್ರಿ. ಅನುಜೆ ಸೃಜನ ಅಂತಿಮ ಬಿ. ಕಾಂ. ವಿದ್ಯಾರ್ಥಿ. ಅನುಜ ಕಾರ್ತಿಕ್ ಪ್ರಥಮ ಬಿಸಿಎ ವಿದ್ಯಾರ್ಥಿ. ಶೃುತಿ ಅವರು ತಮ್ಮ ಕಲಾ ಸಾಧನಾ ಕಿರೀಟದ ಹೊನ್ನ ಪ್ರಭೆಗಳಿಂದ ಕಾವಳಕಟ್ಟೆ ಊರಿಗೆ ಹೊಂಬೆಳಕನು ಚೆಲ್ಲುತ್ತಿದ್ದಾರೆ

ಶೃುತಿ ದಾಸ್ ಅವರ ಕಾರ್ಯಕ್ಷೇತ್ರ ಮತ್ತು ಕಲಾಕ್ಷೇತ್ರಗಳು ವೈವಿಧ್ಯಮಯವಾಗಿವೆ. ಯಕ್ಷಗಾನ, ಭರತನಾಟ್ಯ, ಸಮಕಾಲೀನ ನೃತ್ಯ, ಜಾನಪದ ನೃತ್ಯ, ಚಲನಚಿತ್ರ ನೃತ್ಯ, ದೂರದರ್ಶನದಲ್ಲಿ ಅಭಿನಯ, ಛದ್ಮವೇಷ, ಪ್ರತಿಭಾ ಪ್ರದರ್ಶನ, ಚಿತ್ರಕಲೆ, ಪ್ರಬಂಧ ರಚನೆ, ಭಾಷಣ, ಲೇಖನ ಬರಹ, ಪತ್ರಿಕೋದ್ಯಮ ಇತ್ಯಾದಿ ಇತ್ಯಾದಿಗಳು. ಯಕ್ಷಗಾನ ಕೌಟುಂಬಿಕ ನೆಲೆಯಲ್ಲಿ ದಕ್ಕಿದ ಕಲೆ. ಏಕೆಂದರೆ ಶೃುತಿ ಅವರ ತಂದೆ ಶ್ರೀ ದಿವಾಕರ್ ಅವರು ತೆಂಕುತಿಟ್ಟಿನ ನುರಿತ ಯಕ್ಷಗಾನ ಕಲಾವಿದರು.

ಯಕ್ಷ ಕಲೆಯ ಸೆಲೆ

ದಿವಾಕರ್ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಬಾಲ್ಯದಲ್ಲಿ ತಂದೆಯಿಂದ ಬಳುವಳಿಯಾಗಿ ಬಂದ ಯಕ್ಷ ಕಲೆಯನ್ನು ಅತ್ಯಂತ ಒಲವಿನಿಂದ ಮೈಗೂಡಿಸಿಕೊಂಡು ಬೆಳೆಸುತ್ತ ಬೆಳೆದವರು ಶೃುತಿ. ನಂತರದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಕೊಳ್ಯೂರು ರಾಮಚಂದ್ರ ರಾವ್ ಅವರಿಂದ ಲಾಸ್ಯದ ಮಟ್ಟುಗಳನ್ನು ಕಲಿತರೆ, ಯೋಗೀಶ್ ಆಚಾರ್ಯ, ಸತೀಶ್ ಕಾರ್ಕಳ, ಅರುಣ್ ಭಟ್, ಚೈತ್ರಾ ರಾವ್ ಅವರಿಂದ ಮುಮ್ಮೇಳದ ಸರ್ವ ಮಟ್ಟುಗಳನ್ನು ಕಲಿತವರು.

ಪೌರಾಣಿಕ ಪಾತ್ರಗಳಾದ ಸುದರ್ಶನ, ಕೃಷ್ಣ, ಬಭ್ರುವಾಹನ, ಚಿತ್ರವಾಹನ, ಮದನ, ವಿಷ್ಣು, ಧಕ್ಷ, ಈಶ್ವರ, ದೇವೇಂದ್ರ, ಶಶಿಪ್ರಭೆ, ಭ್ರಮರಕುಂತಲೆ, ವೀರಭದ್ರ, ದೇವಿ ಮುಂತಾದ ಪಾತ್ರಗಳು ಮೆಚ್ಚಿನವುಗಳಾದರೆ ಐತಿಹಾಸಿಕ ಪಾತ್ರಗಳಾದ ಕೋಟಿ, ಚೆನ್ನಯ ಪಾತ್ರಗಳನ್ನು ನಿರ್ವಹಿಸಿ ಯಕ್ಷ ರಸಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಸಾಧನೆಯ ಹಾದಿಯಲ್ಲಿ:

ಭರತನಾಟ್ಯವನ್ನು ನೃತ್ಯ ಗುರುಗಳಾದ ಸಾತ್ವಿ ಕಿರಣ್, ಪೃಥ್ವಿ ಕಿರಣ್ ಹಾಗೂ ಜಾನಪದ ನೃತ್ಯವನ್ನು ಪ್ರತಿಮಾ ಅಂಚನ್ ಅವರಿಂದ ಕರಗತ ಮಾಡಿಕೊಂಡವರು ಶೃುತಿ. ಚಲನಚಿತ್ರ ನೃತ್ಯ, ಸಮಕಾಲೀನ ನೃತ್ಯಗಳನ್ನು ದೂರದರ್ಶನ ಮತ್ತು ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸಿ ಏಕಲವ್ಯ ನಿಷ್ಠೆಯಲ್ಲಿ ಇಷ್ಟಪಟ್ಟು ಕಲಿತವರು. ಶೃುತಿ ಅವರ ನೃತ್ಯ ಪ್ರದರ್ಶನಗಳು ರಾಜ್ಯದ, ರಾಷ್ಟ್ರದ ಮೇರೆಯನ್ನು ಮೀರಿ ನಡೆದಿವೆ. ಬಾಂಗ್ಲಾದೇಶದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಶೃುತಿ ಅವರ ವೈವಿಧ್ಯ ಕಲಾ ಪ್ರೌಢಿಮೆಯನ್ನು ಗುರುತಿಸಿ ಹಲವಾರು ಸಂಸ್ಥೆಗಳು ಪ್ರಶಸ್ತಿಗಳಿಂದ ಪುರಸ್ಕರಿಸಿವೆ. ಆಫ್ರಿಕಾ ಶೃಂಗಸಭೆಯ ಕಾರ್ಯಕ್ರಮದಲ್ಲಿಅಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ‘ಶೃಂಗ ಬಿಂದು’ ಪುರಸ್ಕಾರವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಬೆಂಗಳೂರು ರವೀಂದ್ರ ಕಲಾಕ್ಷೇತ್ರದಿಂದ “ಸಿರಿಗನ್ನಡಂ ರಾಷ್ಟ್ರೀಯ ನೃತ್ಯ ಕಲಾರತ್ನ” ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.

ದೆಹಲಿಯಲ್ಲಿ ನಡೆದ ಆಫ್ರಿಕಾ ಶೃಂಗಸಭೆಯಲ್ಲಿ ಯಕ್ಷಗಾನದ ಪಾತ್ರಮಾಡಿ ಸಭಿಕರ ಹೃದಯ ಗೆದ್ದಿದ್ದಾರೆ. ಮಿಜೋರಾಂನಲ್ಲಿ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ. ಮಂಗಳೂರಿನ ಪುರಸಭೆಯ ಸಭಾಗೃಹದಲ್ಲಿ ಪ್ರದರ್ಶನಗೊಂಡಿದ್ದ ಲಂಡನ್ ಯಕ್ಷಗಾನ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಹಂತ ತಲುಪಿದವರು. ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ, ಉಜಿರೆಯ ವಿಶ್ವ ತುಳು ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ

ಹಂಪಿ ಉತ್ಸವ, ಮೈಸೂರು ದಸರಾ, ಬೆಂಗಳೂರಿನ ಕಡಲೋತ್ಸವ, ಮಡಿಕೇರಿ ಉತ್ಸವ, ಕುದ್ರೋಳಿ ದಸರಾ ಸೇರಿದಂತೆ ಶೃುತಿ ಅವರು ಒಂದು ಸಾವಿರದ ಆರುನೂರಕ್ಕಿಂತ ಹೆಚ್ಚು ವೇದಿಕೆಗಳಲ್ಲಿ ಯಕ್ಷಗಾನ ಮತ್ತು ನೃತ್ಯ ಪ್ರದರ್ಶನಗಳಲ್ಲಿ ಪಾಲುಪಡೆದ ಕೀರ್ತಿಗೆ ಭಾಜನರಾಗಿದ್ದಾರೆ. ಕಲ್ಹರ್ಸ್ ಕನ್ನಡ ವಾಹಿನಿಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ, ಝೀ ಕನ್ನಡ ವಾಹಿನಿಯ ‘ಚಿಟ್ಟೆ ಹೆಜ್ಜೆ’ ಮುಂತಾದ ಧಾರಾವಾಹಿಗಳಲ್ಲಿ ನೃತ್ಯ ಹಾಗೂ ಚಂದನ ವಾಹಿನಿಯ ‘ಸಂಪೂರ್ಣ ರಾಮಾಯಣ’ ಯಕ್ಷಗಾನದಲ್ಲಿ ‘ಸತ್ಯದೇವತೆ’ಯ ಪಾತ್ರವನ್ನು ಅಭಿನಯಿಸಿದ್ದಾರೆ.

ಮೂಡಬಿದ್ರೆಯ ನಡೆದ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಪ್ರತಿಭಾ ರತ್ನ” ರಾಜ್ಯ ಮಟ್ಟದ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಸರಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಂಯುಕ್ತತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ಚಿಗುರು – 2013” ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ. ಸ್ವಸ್ತಿಕ್ ಫೆಂಡ್ಸ್ ಕ್ಲಬ್  ಪುಂಜಾಲಕಟ್ಟೆ ಇವರು ನಡೆಸಿದ ‘ಸಾಮೂಹಿಕ ವಿವಾಹ’ ಸಮಾರಂಭದಲ್ಲಿ ‘ಸ್ವಸ್ತಿಕ್ ಸಂಭ್ರಮ’ ಪುರಸ್ಕಾರ, ಗೈಡ್ಸ್ ನಲ್ಲಿ ರಾಷ್ಟ್ರಪತಿ ಪುರಸ್ಕಾರ, ವಿಜ್ಞಾನ ಪ್ರತಿಭಾ ಪುರಸ್ಕಾರ ಇತ್ಯಾದಿಗಳು ಶೃುತಿಯವರ ಮಡಿಲು ಸೇರಿವೆ. ‘ಹುಟ್ಟೂರ ಸನ್ಮಾನದೊಂದಿಗೆ ಸುಮಾರು ನಾಲ್ಕು ನೂರರಷ್ಟು ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.

ಯಕ್ಷಗಾನ ತರಬೇತಿ

ಸುಮಾರು ಏಳು ವರ್ಷಗಳಿಂದ “ನಾಟ್ಯ ಲಹರಿ ತಂಡ ಕಾವಳಕಟ್ಟೆ” ಎನ್ನುವ ಸಂಸ್ಥೆಯನ್ನು ಸಂಸ್ಥಾಪಿಸಿ ಅರುವತ್ತಕ್ಕೂ ಅಧಿಕ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ಮತ್ತು ವಿವಿಧ ಪ್ರಕಾರಗಳ ನೃತ್ಯ ತರಬೇತಿಯನ್ನು ನೀಡುತ್ತ ಬರುತ್ತಿದ್ದಾರೆ. ಈ ತಂಡವು “Natya Lahari Team Kavalkatte” ಹೆಸರಿಂದ You Tube ಮಾಧ್ಯಮದಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಸುಮಾರು ಇನ್ನೂರಷ್ಚು ಶಾಲೆಗಳಲ್ಲಿ ಯಕ್ಷಗಾನ ಮತ್ತು ನೃತ್ಯ ತರಬೇತಿ ಉಚಿತವಾಗಿ ನೀಡಿದ್ದಾರೆ.’ಭಾರತೀಯ ಜೈನ್ ಮಿಲನ್ ‘ಚಿಣ್ಣರ ಮಿಲನ ಯಕ್ಷಚಾವಡಿ ಬಂಟ್ವಾಳ’ ಈ ಸಂಸ್ಥೆಗಳಲ್ಲಿ ಆರು ವರ್ಷಗಳಿಂದ ಯಕ್ಷಗಾನ ತರಬೇತಿ ನೀಡುತ್ತದ್ದಾರೆ.

ಶೃುತಿ ಅವರು ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಶಾಲಾ /ಕಾಲೇಜ್ ಶಿಕ್ಷಣಗಳಲ್ಲಿಯೂ  ಸೈ  ಎನ್ನಿಸಿಕೊಂಡಿದ್ದಾರೆ

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯಿಂದ ತಮ್ಮ ಪ್ರೌಢ ಶಿಕ್ಷಣವನ್ನು ಪಡೆದವರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಿಂದ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ದೇರಳಕಟ್ಟೆಯ ‘ನಿಟ್ಟೆ ಇನ್ಸಿಟ್ಯೂಟ್ ಆಫ್ ಕಮ್ಯೂನಿಕೇಶನ್’ ಇಲ್ಲಿಂದ ಪಡೆದಿರುವರು.

ಪ್ರಸ್ತುತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವ ಶೃುತಿ ಅವರಿಗೆ ಉತ್ತಮ ಬರಹಗಾರ್ತಿ ಆಗುವ ಕನಸಿದೆ. ಅವರ ಭವಿತವ್ಯದ ವೃತ್ತಿ ಬದುಕು, ಕಲಾ ಬದುಕು ಹಾಗೂ ಸಾಂಸಾರಿಕ ಬದುಕುಗಳು ಸುಗಮ, ಸುಖಕರ, ಸುಲಲಿತವಾಗಿ ಸಾಗಲಿ. ಸಾಧನೆ, ಕೀರ್ತಿ, ಪ್ರತಿಷ್ಠೆಗಳು ಶಿಖರವೇರಿ ಇತರರಿಗೆ ಮಾದರಿಯಾಗಲಿ ಎಂಬ ಹಾರೈಕೆ ನಮ್ಮದು.

»ಉದಯ ಶೆಟ್ಟಿ ಪಂಜಿಮಾರು