ಬ್ಯಾಂಕ್ ಮ್ಯಾನೇಜರ್ ಕರೆ ಬಂದಾಗ ಕಾದಿತ್ತು ಶಾಕಿಂಗ್ ನ್ಯೂಸ್: ಗೊತ್ತೇ ಆಗದಂತೆ ಕಾಫಿ ನಾಡಿನ ಮಹಿಳೆಯ ₹18.24 ಲಕ್ಷ ಮಂಗಮಾಯ ಮಾಡಿದ ಸೈಬರ್ ಕಳ್ಳರು

ಚಿಕ್ಕಮಗಳೂರು: ಡಿಜಿಟಲ್ ಯುಗದಲ್ಲಿ ಮೊಬೈಲ್‌ಗೆ ಬರುವ ಓಟಿಪಿಯೇ ಭದ್ರತೆ ಎಂದು ನಂಬಿದ್ದರೆ ಅದು ಅಪಾಯಕಾರಿಯಾಗಬಹುದು ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಭಾರೀ ಸೈಬರ್ ವಂಚನೆ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ. ನಗರದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹18.24 ಲಕ್ಷ ಹಣ ಕಳ್ಳತನವಾಗಿದ್ದು, ಹಣ ಡೆಬಿಟ್ ಆದ ಕುರಿತಾಗಿ ಒಂದೇ ಒಂದು SMS ಅಥವಾ OTP ಕೂಡ ಅವರ ಮೊಬೈಲ್‌ಗೆ ಬಂದಿಲ್ಲ. ಗೊತ್ತಾಗದಂತೆ ಇಷ್ಟು ಹಣ ಮಾಯವಾದ ಪ್ರಕರಣ ರಾಜ್ಯದಲ್ಲೇ ಅಪರೂಪದ್ದಾಗಿದೆ.

ನಗರದ ಐಡಿಎಫ್‌ಸಿ ಬ್ಯಾಂಕ್ ಖಾತೆ ಹೊಂದಿದ್ದ ಮಹಿಳೆ ಈ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಮಾರ್ಚ್ 4ರಿಂದ ಏಪ್ರಿಲ್ 21ರವರೆಗೆ ಸುಮಾರು ಒಂದೂವರೆ ತಿಂಗಳ ಕಾಲ ಹಂತ ಹಂತವಾಗಿ ಖಾತೆಯಿಂದ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಬ್ಯಾಂಕ್ ವ್ಯವಹಾರಗಳ ವೇಳೆ ಗ್ರಾಹಕರ ಮೊಬೈಲ್‌ಗೆ ಬರುವ OTP ಹಾಗೂ ಅಲರ್ಟ್ ಮೆಸೇಜ್‌ಗಳನ್ನು ಹ್ಯಾಕರ್‌ಗಳು ತಾಂತ್ರಿಕವಾಗಿ ತಡೆಹಿಡಿದಿರುವ ಶಂಕೆ ವ್ಯಕ್ತವಾಗಿದೆ.

ಖಾತೆಯಲ್ಲಿದ್ದ ಹಣ ಸಂಪೂರ್ಣ ಖಾಲಿಯಾದ ನಂತರ ಬ್ಯಾಂಕ್‌ಗೆ ಭೇಟಿ ನೀಡಿದ ಮಹಿಳೆಗೆ ಈ ವಂಚನೆ ಬೆಳಕಿಗೆ ಬಂದಿದೆ. ಇದು ಅತ್ಯಂತ ಸುಧಾರಿತ ತಂತ್ರಜ್ಞಾನ ಬಳಸಿ ನಡೆಸಿದ ಸೈಬರ್ ಕ್ರೈಂ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಕಷ್ಟಪಟ್ಟು ಕೂಡಿಟ್ಟ ಲಕ್ಷಾಂತರ ರೂಪಾಯಿ ಕ್ಷಣಾರ್ಧದಲ್ಲಿ ಕಳ್ಳರ ಪಾಲಾಗಿರುವುದು ಕುಟುಂಬವನ್ನು ಆಘಾತಕ್ಕೀಡು ಮಾಡಿದೆ.

ಸೈಬರ್ ಖದೀಮರು ಈಗ ಸಿಮ್ ಸ್ವಾಪಿಂಗ್, ಮಾಲ್ವೇರ್ ಲಿಂಕ್‌ಗಳು ಹಾಗೂ ಮೊಬೈಲ್ ಹ್ಯಾಕಿಂಗ್ ತಂತ್ರಗಳ ಮೂಲಕ ಬಳಕೆದಾರರ ಮೊಬೈಲ್ ಮೇಲೆಯೇ ನಿಯಂತ್ರಣ ಸಾಧಿಸುತ್ತಿದ್ದಾರೆ. ಇದರ ಪರಿಣಾಮ ಬ್ಯಾಂಕ್ ಕಳುಹಿಸುವ ಸಂದೇಶಗಳು ಗ್ರಾಹಕರಿಗೆ ತಲುಪುವ ಮುನ್ನವೇ ವಂಚಕರ ಕೈಗೆ ಸಿಲುಕುತ್ತಿವೆ.

ಈ ಕುರಿತು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್ ಮೆಸೇಜ್‌ಗಳು ಏಕಾಏಕಿ ನಿಲ್ಲುವುದು, ಮೊಬೈಲ್ ಸಿಗ್ನಲ್ ಪದೇಪದೇ ಕೈಕೊಡುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳು ಬರುವುದು ಕಂಡುಬಂದರೆ ತಕ್ಷಣ ಬ್ಯಾಂಕ್ ಹಾಗೂ ಸೈಬರ್ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.