ನಾನು ಐದು ವರ್ಷದಲ್ಲಿ ತುಂಬಾ ಕೆಲಸ ಮಾಡಿದ್ದೇನೆ: ಶೋಭಾ ಕರಂದ್ಲಾಜೆ

ಕುಂದಾಪುರ: ಕಳೆದ ೭೦ ವರ್ಷಗಳಲ್ಲಿ ಆಗದಿರುವಂತಹ ಕೆಲಸವನ್ನು ನಾನು ಈ ೫ ವರ್ಷಗಳಲ್ಲಿ ಮಾಡಿದ್ದೇನೆ.ಇಷ್ಟನ್ನು ಇಲ್ಲಿ ಬೇರೆ ಯಾರೂ ಮಾಡಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.ಅವರು ಗುರುವಾರ ಕುಂದಾಪುರದ ಕೋರ್ಟ್‌ನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರ ಬಳಿ ಮತಯಾಚಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನಾನು ತಂದ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರವೇ ಮಾತನಾಡಿದ್ದೇನೆ. ಜಯಪ್ರಕಾಶ್ ಹೆಗ್ಡೆ ನಮ್ಮ ಪಕ್ಷದ ಹಿರಿಯ ನಾಯಕರು, ಅವರ ಬಗ್ಗೆ ಅಪಾರವಾದ ಗೌರವವಿದೆ ಎಂದರು.
ಸಖಿ ಸೆಂಟರ್, ಕೇಂದ್ರಿಯ ವಿದ್ಯಾಲಯ, ಬ್ರಹ್ಮಾವರದ ಪಾಸ್‌ಪೋರ್ಟ್ ಸೇವಾ ಕೇಂದ್ರ ಯಾರು ತಂದಿದ್ದು ಅಂತ ದಾಖಲೆಯಿದೆ. ನನ್ನ ಕಾಲದಲ್ಲಿ ಅದು ಜಾರಿಗೆ ತಂದಿದ್ದೇನೆ. ಇದಕ್ಕಾಗಿ ಸಾಕಷ್ಟು ಶ್ರಮಿಸಿದ್ದೇನೆ ಎಂದ ಅವರು, ಹೆಗ್ಡೆ ಅವರನ್ನು ಈಗಾಗಲೇ ಪ್ರಚಾರಕ್ಕೆ ಕರೆದಿದ್ದೇವೆ. ಹಲವೆಡೆಗಳಲ್ಲಿ ನಮ್ಮೊಂದಿಗೆ ಪ್ರಚಾರಕ್ಕೆ ಬಂದಿದ್ದಾರೆ. ಗೋಬ್ಯಾಕ್ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಕೇಂದ್ರೀಯ ವಿದ್ಯಾಲಯ ಹಾಗೂ ಪಾಸ್‌ಪೋರ್ಟ್ ಸೇವಾ ಕೇಂದ್ರ ಕ್ಷೇತ್ರಕ್ಕೆ ನಾನು ತಂದಿದ್ದು ಎಂಬ ಜಯಪ್ರಕಾಶ್ ಹೆಗ್ಡೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ತಂದರೂ ನಮಗೆ ಸಂತೋಷ. ಪಾಸ್‌ಪೋರ್ಟ್ ಸೇವಾ ಕೇಂದ್ರ ಯಾವಾಗ ಉದ್ಘಾಟನೆಯಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರೇ ತಂದಿದ್ದು ಎಂದು ಹೇಳಿದರೂ ನನ್ನದೇನು ವಿರೋಧವಿಲ್ಲ. ನಾನು ಸುಷ್ಮಾ ಸ್ವರಾಜ್ ಅವರಿಗೆ ಪತ್ರಕೊಟ್ಟು ಪ್ರತಿ ದಿನ ಅವರ ಬೆನ್ನುಬಿದ್ದ ಪರಿಣಾಮವಾಗಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆಗೊಂಡಿದೆ .ನನ್ನದೇ ಪಕ್ಷದ ನಾಯಕರ ಜೊತೆ ನನ್ನದೇನು ಕಾಂಪಿಟೇಶನ್ ಇಲ್ಲ ಎಂದು ಮುಗುಳ್ನಕ್ಕ ಶೋಭಾ ಕರಂದ್ಲಾಜೆಯವರು ಕೇಂದ್ರಿಯ ವಿದ್ಯಾಲಯ ಯಾರು ತಂದಿದ್ದಾರೆ ಎನ್ನುವುದು ಪ್ರಶ್ನೆಯಲ್ಲ. ಯಾವಾಗ ಆರಂಭವಾಗಿದೆ ಎನ್ನುವುದು ಪ್ರಶ್ನೆ. ನಾನು ಜಯಪ್ರಕಾಶ್ ಹೆಗ್ಡೆಯವರ ಪ್ರಶ್ನೆಗಳಿಗೆ ಮತ್ತೆ ಪ್ರತ್ಯುತ್ತರ ಕೊಡಲು ಹೋಗುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಜಯಪ್ರಕಾಶ್ ಹೆಗ್ಡೆಯವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದರು.
ನಾಪತ್ತೆಯಾದ ಮೀನುಗಾರರು ಸಚಿವ ಅನಂತ ಕುಮಾರ್ ಹೆಗಡೆಯವರ ಮತದಾರರು ಎಂಬ ಮೀನುಗಾರಿಕಾ ಸಚಿವ ನಾಡಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ನೋವಲ್ಲೂ ರಾಜಕೀಯ ಮಾಡುವ ಅವರ ಹೀನ ಮನಸ್ಥಿತಯನ್ನು ಸೂಚಿಸುತ್ತಿದೆ ಎಂದರು.