ಬೆಳಗಾವಿ: ಬಹುಕೋಟಿ ರೂಪಾಯಿ ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಿಐಡಿ ಅಧಿಕಾರಿಗಳು ಬಾಲಿವುಡ್ ನಟಿ Sunny Leone ಸೇರಿದಂತೆ ಹಲವು ನಟ-ನಟಿಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಸಿಐಡಿ ತನಿಖೆಯಲ್ಲಿ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಸನ್ನಿ ಲಿಯೋನ್ ಸೇರಿದಂತೆ ಹಲವು ಸಿನಿಮಾ ಕಲಾವಿದರಿಗೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿತ ವ್ಯಕ್ತಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಡಿ ಡಿಐಜಿ Bheemashankar Guled, “ಶಿವಾನಂದ ನೀಲಣ್ಣವರ ಸಾರ್ವಜನಿಕರ ಹಣವನ್ನು ಚಿತ್ರ ನಟಿಯರಿಗೆ ನೀಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸನ್ನಿ ಲಿಯೋನ್ ಸೇರಿದಂತೆ ಹಣ ಪಡೆದ ಇತರೆ ನಟ-ನಟಿಯರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ” ಎಂದು ತಿಳಿಸಿದರು.
ತನಿಖೆ ಪ್ರಕಾರ, ಶಿವಾನಂದ ನೀಲಣ್ಣವರ ಸುಮಾರು 40,700 ಹೂಡಿಕೆದಾರರಿಂದ 2,400 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದಾನೆ ಎನ್ನಲಾಗಿದೆ. ಈ ಪೈಕಿ ಸುಮಾರು 10,000 ಹೂಡಿಕೆದಾರರು ನೆರೆಯ Maharashtra ರಾಜ್ಯದವರಾಗಿದ್ದಾರೆ.
ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂಪಾಯಿಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಅದರಲ್ಲಿ ಸುಮಾರು 170 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ವಂಚನೆ ಜಾಲವನ್ನು ನಡೆಸಲು ಸುಮಾರು 30 ಬ್ಯಾಂಕ್ ಖಾತೆಗಳನ್ನು ಬಳಸಲಾಗಿದ್ದು, ಒಂದೇ ಖಾತೆಯಲ್ಲಿ 36,200 ಪುಟಗಳಷ್ಟು ವಹಿವಾಟಿನ ದಾಖಲೆ ಪತ್ತೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದ ಕುರಿತು ಸಿಐಡಿ ತನಿಖೆ ಮುಂದುವರಿದಿದ್ದು, ಹಣ ವರ್ಗಾವಣೆಯ ಸಂಪೂರ್ಣ ಜಾಲ ಹಾಗೂ ಸಂಬಂಧಿತರ ಪಾತ್ರದ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.















