ಶಿರ್ವ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು

ಉಡುಪಿ: ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಶುಕ್ರವಾರ (ಆ. 7) ರಾತ್ರಿ 7-30ಕ್ಕೆ ಶಿರ್ವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ನಡೆದಿದೆ.

ಶಿರ್ವ ಇಂದ್ರಪುರ ನಿವಾಸಿ, ಶಿರ್ವ ದೇವಿ ವೈಂಡಿಂಗ್ ಸೆಂಟರ್ ನ ಮಾಲಕ ಪ್ರಕಾಶ್ ಆಚಾರ್ಯ(45) ಮೃತ ದ್ವಿಚಕ್ರ ವಾಹನ ಸವಾರ. ಪ್ರಕಾಶ್ ಆಚಾರ್ಯ ಅವರು ಪೆಟ್ರೋಲ್ ಪಂಪ್ ಎದುರುಗಡೆ ಇರುವ ಕುತ್ಯಾರು ರಸ್ತೆಯಲ್ಲಿ ತನ್ನ ಮನೆ ಕಡೆ ತೆರಳಲು ಮುಖ್ಯರಸ್ತೆ ಬದಿ ನಿಂತಿದ್ದು, ಬೆಳ್ಮಣ್ ಕಡೆಯಿಂದ ವೇಗವಾಗಿ ಬಂದ ಸ್ವಿಫ್ಟ್ ಕಾರು ಬೇರೊಮದು ವಾಹನವನ್ನು ಓವರ್ ಟೇಕ್ ಮಾಡಿ ವಿರುದ್ಧ ದಿಕ್ಕಿನಲ್ಲಿ ಬಂದು ಸ್ಕೂಟಿಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಶಿರ್ವಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಿರ್ವಪೊಲೀಸರು ತನಿಖೆ ನಡೆಸುತ್ತಿದ್ದಾರೆ.