ಶಿರ್ಲಾಲು: ಹಿಂದೂ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ; ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಹಸುಗಳ ರಕ್ಷಣೆ

ಶಿರ್ಲಾಲು: ಮಾರುತಿ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಹಸುಗಳನ್ನು ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರ ಕಾರ್ಯಾಚರಣೆಗೆ ಬೆಚ್ಚಿದ ಗೋಕಳ್ಳರು ಕಾರು ಬಿಟ್ಟು ಪರಾರಿಯಾಗಿದ್ದಾರೆ.

ಶಿರ್ಲಾಲಿನಲ್ಲಿ ಗೋ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಭೆ ನಡೆದ ಕೆಲವೇ ಗಂಟೆಯಲ್ಲಿ ಈ ಕೃತ್ಯ ನಡೆದಿದೆ. ಕಾರ್ಯಕರ್ತರು ಪ್ರತಿಭಟನಾ ಸಭೆ ಮುಗಿಸಿಕೊಂಡು ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ಸಿಕ್ಕಿತ್ತು. ಇದನ್ನು ಬೆನ್ನತ್ತಿದ ಕಾರ್ಯಕರ್ತರು ಕಾರನ್ನು ಹಿಂಬಾಲಿಸಿದ್ದಾರೆ. ಗೋಕಳ್ಳರು ಕೆರುವಾಶೆ ಕಡೆಗೆ ಹೋಗುತ್ತಿದ್ದು, ಬಳಿಕ ಅಲ್ಲಿಯೇ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಕಾರ್ಯಕರ್ತರಿಗೆ ಕಾರಿನಲ್ಲಿ ಹಿಂಸಾತ್ಮಕವಾಗಿ ಎರಡು ದನಗಳನ್ನು ಕಟ್ಟಿರುವುದು ಗೊತ್ತಾಗಿದೆ. ಎರಡು ದನಗಳನ್ನು ಕಾರ್ಯಕರ್ತರು ರಕ್ಷಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.