ಶಿವಮೊಗ್ಗ: ಅಬ್ಬಲಗೆರೆ–ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಡೈನಾಮೈಟ್ ಗುರುವಾರ ರಾತ್ರಿ ಸ್ಫೋಟಿಸಿ, ಬಿಹಾರ ಮೂಲದ ಸುಮಾರು 8 ಕಾರ್ಮಿಕರು ಮೃತಪಟ್ಟಿದ್ದಾರೆ.
ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೈಟ್ ಬಾಕ್ಸ್‌ಗಳು ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ. ಸ್ಥಳದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ.
ಲಾರಿಯಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳಲ್ಲಿ, ಬಹುತೇಕ ಜಿಲ್ಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಲಾರಿ ಛಿದ್ರ ಛಿದ್ರವಾಗಿದೆ. ಲಾರಿಯಲ್ಲಿದ್ದ ಬಿಹಾರ ಮೂಲದ 8ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಲಾರಿ ಚಾಲಕ, ಕಾರ್ಮಿಕರು ಸೇರಿದಂತೆ 8ಕ್ಕೂ ಹೆಚ್ಚು ಕಾರ್ಮಿಕರ ಮೃತದೇಹವೂ ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿವೆ.
ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಕೆಲ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಳ್ಳುವ ಸಾಧ್ಯತೆಯಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಷ್ಟೇ ಅಲ್ಲ ಶೋಧಕಾರ್ಯಕ್ಕೆ ಕತ್ತಲು ಅಡ್ಡಿಯಾಗಿದ್ದರಿಂದ ಮೃತದೇಹಗಳ ಪತ್ತೆ ಹಚ್ಚಲು ಪರದಾಡುವಂತಾಗಿತ್ತು. ಇನ್ನು ಬೆಂಗಳೂರಿನಿಂದ ಹೊರಟಿರುವ ಎನ್ಡಿಆರ್ಎಫ್ ತಂಡ ಘಟನಾ ಸ್ಥಳಕ್ಕೆ ಆಗಮಿಸಲಿದ್ದು, ಕಾರ್ಯಾಚರಣೆಗೆ ನೆರವಾಗಲಿದೆ.
ಅಕ್ರಮ ಕಲ್ಲು ಗಣಿಗಾರಿಕೆ:
ಇಂತಹವೊಂದು ಅನಾಹುತಕ್ಕೆ ಕಾರಣ ಶಿವಮೊಗ್ಗದ ಹುಣಸೋಡು ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ. ಅಂದಹಾಗೆ ಈ ಜಾಗ ಅವಿನಾಶ್ ಎಂಬುವವರಿಗೆ ಸೇರಿದ್ದು. ಭಾಸ್ಕರ್ ಅನ್ನೋ ವ್ಯಕ್ತಿ ಗುತ್ತಿಗೆ ಪಡೆದು, ರೈಲ್ವೆ ಇಲಾಖೆಗೆ ಜಲ್ಲಿ ಪೂರೈಕೆ ಮಾಡ್ತಿದ್ದರಂತೆ. ಅಂದಹಾಗೆ ಇಲ್ಲಿರುವ ಬಂಡೆಗಳನ್ನ ಒಡೆಯಲು ದೊಡ್ಡ ಪ್ರಮಾಣದಲ್ಲಿ ಲಾರಿಯಲ್ಲಿ ಜಿಲೆಟಿನ್ ವಸ್ತು ಸಾಗಿಸ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹೆದ್ದಾರಿ, ಭೂಮಿಗಳಲ್ಲಿ ಬಿರುಕು:
ಸ್ಫೋಟದ ತೀವ್ರತೆಗೆ ಕಿ.ಮೀ.ಗಟ್ಟಲೇ ರಸ್ತೆಗಳಲ್ಲಿ ಬಿರುಕು ಬಿಟ್ಟಿವೆ. ಈ ಜಾಗಕ್ಕೆ ಹೊಂದಿಕೊಂಡಿರುವ ಇತರೆ ಭಾಗದಲ್ಲಿ ಭೂಮಿಗಳು ಬಿರುಕು ಬಿಟ್ಟಿವೆ.