ಉಡುಪಿ: ಶಿಕ್ಷಕರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಡುಪಿ ಎಸ್‌ಸಿ—ಎಸ್‌ಟಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡ ಎಸ್‌ಸಿ—ಎಸ್‌ಟಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಜಿಲ್ಲಾಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ವಂಚಿತ ಮಕ್ಕಳಿಗೆ ಯಾವ ರೀತಿ ನ್ಯಾಯ ಒದಗಿಸಬಹುದು ಹಾಗೂ ಶಿಕ್ಷಣ ಕೊಡಬಹುದು ಎಂಬುವುದನ್ನು ಶಿಕ್ಷಕರು ಯೋಚಿಸಬೇಕು. ಮಕ್ಕಳ ಗೈರು ಹಾಜರಿಯ ಬಗ್ಗೆ ಪೋಷಕರು ಜವಾಬ್ದಾರಿ ವಹಿಸುವುದಿಲ್ಲ. ಹಾಗಾಗಿ ಶಿಕ್ಷಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಶಾಲೆ ಬಿಡುವ ಮಕ್ಕಳ ಮನೆಗೆ ಭೇಟಿ ನೀಡಿ ಅವರನ್ನು ಮತ್ತೆ ಶಾಲೆಗೆ ಕರೆತರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಸಿ—ಎಸ್‌ಟಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ವಿ.ಟಿ. ವೆಂಕಟೇಶಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆಯೇ, ಇಲ್ಲವೇ ಎಂಬುವುದನ್ನು ಸಮೀಕ್ಷೆ ಮಾಡಿ ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ನೀಡಬೇಕು. ಆ ಬಳಿಕವೇ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಆದರೆ ಶಿಕ್ಷಣ ಇಲಾಖೆಯಿಂದ ಈ ಕಾರ್ಯ ಆಗುತ್ತಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಏಕಾಏಕಿಯಾಗಿ ಮುಚ್ಚುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ನಿಯಮದ ಪ್ರಕಾರ ಮುಚ್ಚುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಮುಚ್ಚಲ್ಪಟ್ಟಿರುವ 15680 ಸರ್ಕಾರಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪುನಾರಂಭಿಸಬೇಕು. ಇಲ್ಲದಿದ್ದರೆ ಆ ಶಾಲೆಗಳನ್ನು ನಮ್ಮ ಸಂಘಟನೆಗೆ ದತ್ತು ನೀಡಿ ನಾವು ಮುಂದುವರೆಸುತ್ತೇವೆ ಎಂದು ಸಿಎಂಗೆ ಸವಾಲು ಹಾಕಿದರು.
ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ವ್ಯಾಪ್ತಿಗೆ ಬರುವ ಬಿಎಲ್‌ಒಗಳಿಗೆ ತಾಲ್ಲೂಕಿನಲ್ಲಿ ಮುಚ್ಚಿರುವ ಎರಡು ಸರ್ಕಾರಿ ಶಾಲೆಗಳನ್ನು ಪುನಾರಂಭಿಸುವಂತೆ ಸೂಚನೆ ನೀಡಬೇಕು. ಉತ್ತಮ ಭಾವನೆಯಿಂದ ಪ್ರಾಮಾಣಿಕವಾಗಿ ಈ ಕೆಲಸವನ್ನು ಮಾಡಿದರೆ ಮುಚ್ಚಿರುವ ಸರ್ಕಾರಿ ಶಾಲೆಗಳನ್ನು ಪುನಾರಂಭಿಸಲು ಸಾಧ್ಯ ಎಂದರು.
ಎಸ್‌ಟಿ—ಎಸ್‌ಸಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಮೇಲ್ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ ನಮ್ಮ ಪಾಲಿಗೆ ಸರ್ಕಾರ ಕೈಹಾಕುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯದವರಿಗೆ ಎಲ್ಲ ರೀತಿಯಿಂದಲೂ ಶೋಷಣೆ ಆಗುತ್ತಿದೆ. ಹಾಗಾಗಿ ದಲಿತರು, ಶೋಷಿತ ವರ್ಗದವರು ಜಾಗೃತರಾಗಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಸಂಘದ ಗೌರವಾಧ್ಯಕ್ಷ ಸುಂದರ್ ಎ. ಮಾಸ್ತರ್ ಹೇಳಿದರು.
ಸಂಘದ ಉಡುಪಿ ಜಿಲ್ಲಾಧ್ಯಕ್ಷ ನಾರಾಯಣ ಮಣೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಸಿ. ಲೋಕೇಶ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್. ಪ್ರಕಾಶ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ. ನಾಯ್ಕ್, ಸಂಘದ ರಾಜ್ಯ ಉಪಾಧ್ಯಕ್ಷೆ ಸುಮಿತ್ರಾ ದುರ್ಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಕೆ. ಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಆಂಜನೇಯ ಸ್ವಾಮಿ, ವಲಯಾಧ್ಯಕ್ಷರಾದ ವೆಂಕ ಉಪ್ಪಾರ್, ನರಸಿಂಹ ನಾಯ್ಕ್, ಬಿ. ವರದರಾಜ್, ಕೆ.ಎಸ್. ಸದಾನಂದ, ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಬಿ. ಪ್ರಕಾಶ್ ಸ್ವಾಗತಿಸಿದರು.