ಶಿಕ್ಷಕಿ ನಾಗರತ್ನ ಇವರಿಗೆ ಶೆಫಿನ್ಸ್ ನ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ

ಉಡುಪಿ: ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ ಅಂಗವಾಗಿ ಶೆಫಿನ್ಸ್ ನಿಂದ ನಡೆಸಲಾದ ಅತಿಥಿ ಹಾಗೂ ಗೌರವ ಶಿಕ್ಷಕರ ತರಬೇತಿಯ 5ನೇ ಬ್ಯಾಚ್ ಉಡುಪಿಯ ಹಿಂದೀ ಪ್ರಚಾರ ಸಮಿತಿಯ ಹಾಲ್ ನಲ್ಲಿ ಸಂಪನ್ನಗೊಂಡಿತು.

ಈ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಅತಿಥಿ ಹಾಗೂ ಗೌರವ ಶಿಕ್ಷಕರೂ ತಾವು ಪಾಠ ಮಾಡುವ ವಿಷಯದ ಮೇಲೆ ಕಿರು ಪಾಠವನ್ನು ಬಹಳಷ್ಟು ಕಲಿಕಾ ಪರಿಕರಗಳ ಜೊತೆಗೆ ಬಹಳ ಅದ್ಭುತವಾಗಿ ಮಾಡಿ, ತಮ್ಮ ಅಧ್ಯಾಪನದಲ್ಲಿನ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದರು. ಭಾಗವಹಿಸಿದ ಅತಿಥಿ ಮತ್ತು ಗೌರವ ಶಿಕ್ಷಕಕರೇ ಅಂಕಗಳನ್ನು ನೀಡಿ, ತಮ್ಮೊಳಗಿಂದ ಒಬ್ಬರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದು ವಿಶೇಷವಾಗಿತ್ತು.

ಕ್ರಿಯಾಶೀಲತೆಯೊಂದಿಗೆ ಭಾಗವಹಿಸಿದ ಶಿಕ್ಷಕಿಯರಲ್ಲಿ ಶೆಫಿನ್ಸ್ ನ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಗೆ ಮಣಿಪಾಲ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕಿ ನಾಗರತ್ನ ಇವರು ಭಾಜನರಾಗಿರುತ್ತಾರೆ. ಕೇವಲ 3 ವರ್ಷ ಮಾತ್ರ ಅಧ್ಯಾಪನದ ಅನುಭವ ಇರುವ ಇವರಿಗೆ ಪ್ರಶಸ್ತಿ ಒಲಿದಿದ್ದು, ಇವರು ‘ನೀ ಸೂರ್ಯನಾದರೆ ಭೂಮಿ ತಿರುಗಲೇ ಬೇಕು’ ಪುಸ್ತಕ ಖ್ಯಾತಿಯ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ A.S.I ಸುರೇಶ್ ನಾಯ್ಕ ಎಂ. ಅವರ ಪತ್ನಿ.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶೆಫಿನ್ಸ್ ಆಡಳಿತ ವಿಶ್ವಸ್ತೆ ಶೆರ್ಲಿ ಮನೋಜ್, ಶೆಫಿನ್ಸ್ ನಿರ್ದೇಶಕ ಮನೋಜ್ ಕಡಬ, ಸಂಯೋಜಕಿ ಜ್ಯೋತಿ ರೆಬೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.

ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್

ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ಉಡುಪಿಯು ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಹಮ್ಮಿಕೊಳ್ಳುತ್ತಿದ್ದು, ಈ ವರೆಗೆ ಒಟ್ಟು 5 ಬ್ಯಾಚ್ ತರಬೇತಿಗಳು ಸಂಪನ್ನಗೊಂಡಿವೆ. ಪ್ರತೀ ಬ್ಯಾಚಿನಲ್ಲಿಯೂ ಒಬ್ಬರು ಅತಿಥಿ ಅಥವಾ ಗೌರವ ಶಿಕ್ಷಕರಿಗೆ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಯನ್ನು ನೀಡುವ ಪರಿಪಾಠವನ್ನು ಹೊಂದಿದ್ದು, ಮೊದಲ ಬ್ಯಾಚಿನಲ್ಲಿ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಶಾಲೆಯ ಗೌರವ ಶಿಕ್ಷಕಿ ಪ್ರಿನ್ಸಿ ಬ್ರಿಟ್ಟೋ ಈ ಪ್ರಶಸ್ತಿಯನ್ನು ಪಡೆದಿದ್ದರೆ, ಎರಡನೇ ಬ್ಯಾಚಿನಲ್ಲಿ ಉಡುಪಿ ತಾಲೂಕು ಮಂಚಿ ಸರಕಾರಿ ಪ್ರೌಢ ಶಾಲೆಯ ಅತಿಥಿ ಶಿಕ್ಷಕ ಗೌರೀಶ್ ಗೌಡ, 3ನೇ ಬ್ಯಾಚಿನಲ್ಲಿ ಜಪ್ತಿ ಶಾಲೆಯ ಉದಯ ಕೊಠಾರಿ ಮತ್ತು 4ನೇಯ ಬ್ಯಾಚಿನಲ್ಲಿ ಕುಂತಳನಗರ ಶಾಲೆಯ ಜೋಸ್ಲಿನ್ ಡಿಸೋಜ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.