ಮಂಗಳೂರು ಪ್ರವೇಶಿಸಿದ ಶೌರ್ಯ ರಥ ಯಾತ್ರೆ; ನಾಳೆ ಉಡುಪಿಯಲ್ಲಿ ಭವ್ಯ ಸಮಾರೋಪ

ಮಂಗಳೂರು: ಯುವ ಸಂಘಟನೆಬಜರಂಗದಳ ನೇತೃತ್ವದಲ್ಲಿ, ವಿಶ್ವ ಹಿಂದು ಪರಿಷತ್ತಿನ 60ನೇ ವರ್ಷಾಚರಣೆ ಪ್ರಯುಕ್ತ ಸೆ.25 ರಂದು ಚಿತ್ರದುರ್ಗದಲ್ಲಿ ಆರಂಭವಾದ ಶೌರ್ಯ ರಥ ಯಾತ್ರೆಯು ರಾಜ್ಯದ ನಾನಾ ಜಿಲ್ಲೆಗಳಲ್ಲಿ 1600 ಕಿ.ಮೀ. ಸಂಚರಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನಡೆಸಿ ಇದೀಗ ಕರಾವಳಿ ಪ್ರವೇಶಿಸಿದ್ದು, ಪುತ್ತೂರು ಮತ್ತು ಬಂಟ್ವಾಳದಲ್ಲಿ ಯಶಸ್ವಿ ಸಮಾವೇಶಗಳನ್ನು ಮುಗಿಸಿ ಇಂದು ಮಂಗಳೂರು ನಗರ ಪ್ರವೇಶಿಸಿದೆ.

ನಗರದ ಹೊರವಲಯದ ಅಡ್ಯಾರಿನಲ್ಲಿ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಅಪರಾಹ್ನ ನಗರದಲ್ಲಿ ರಥಯಾತ್ರೆ ನಡೆಯಲಿದ್ದು ಇದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ನಗರ ಸಂಪೂರ್ಣ ಕೇಸರಿಮಯವಾಗಿದ್ದು ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.

ಸಂಜೆ 4.30ಕ್ಕೆ ಕದ್ರಿ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದ್ದು, ಚಿಂತಕ ಚಕ್ರವರ್ತಿ ಸೂಲಿಬೆಲೆ, ಸಾಧು-ಸಂತರು, ವಿಹೆಚ್‌ಪಿ ಹಾಗೂ ಬಜರಂಗದಳದ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ಯಾತ್ರೆ ಸಮಾರೋಪಗೊಳ್ಳಲಿದ್ದು, ಉಡುಪಿ ನಗರವು ಕೇಸರಿ ಬಾವುಟಗಳಿಂದ ಶೃಂಗರಿಸಿಕೊಂಡಿದೆ. ಪ್ರಖರ ವಾಗ್ಮಿ ಭಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಭಾಗವಹಿಸಲಿದ್ದಾರೆ.

ಸಾಯಿರಾಧ ಗ್ರೂಪ್ಸ್​ ಉಡುಪಿಯ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಮಧ್ಯಪ್ರದೇಶದ ಅಖಿಲೇಶ್ವರಾನಂದ ಮಹಾರಾಜ್ ಮುಂತಾದವರು ಭಾಗವಹಿಸಲಿದ್ದಾರೆ.

ವಿಎಚ್​ಪಿ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್​, ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ.