ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರಿಂದ ಪಕ್ಷದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಅವರು ಈಗಿರುವ ಪದ್ಧತಿಯನ್ನೇ ಮುಂದುವರಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣಾ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ವಾದವನ್ನು ಮಂಡಿಸಿದ ಶಶಿ ತರೂರ್ ತಾವು ಆಯ್ಕೆಯಾದರೆ ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರುವುದಾಗಿ ಹೇಳಿದ್ದಾರೆ.
ನಾವು ಶತ್ರುಗಳಲ್ಲ, ಇದು ಯುದ್ಧವಲ್ಲ. ಇದು ನಮ್ಮ ಪಕ್ಷದ ಭವಿಷ್ಯದ ಸಮೀಕ್ಷೆ. ಕಾಂಗ್ರೆಸ್ ಪಕ್ಷದ ಪ್ರಮುಖ ಮೂವರು ನಾಯಕರಲ್ಲಿ ಖರ್ಗೆ ಒಬ್ಬರು. ಅವರಂತಹ ನಾಯಕರು ಬದಲಾವಣೆ ತರಲು ಸಾಧ್ಯವಿಲ್ಲ ಮತ್ತು ಈಗಿರುವ ವ್ಯವಸ್ಥೆಯನ್ನೇ ಅವರು ಮುಂದುವರಿಸುತ್ತಾರೆ. ಪಕ್ಷದ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತರುತ್ತೇನೆ ಎಂದು ಶಶಿ ತರೂರ್ ನಾಗ್ಪುರದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಯವರು ತಾನು ಪಕ್ಷವನ್ನು ಬಲಪಡಿಸಲು ಚುನಾವಣೆಗೆ ಇಳಿದಿದ್ದೇನೆ ಹೊರತು, ಯಾರನ್ನೂ ವಿರೋಧಿಸಲು ಅಲ್ಲ. ಹಿರಿಯರು ಮತ್ತು ಯುವ ನಾಯಕರು ಅಖಾಡಕ್ಕೆ ಇಳಿಯುವಂತೆ ಒತ್ತಾಯಿಸಿದ ನಂತರ ಚುನಾವಣೆಗೆ ಇಳಿದಿರುವುದಾಗಿ ಹೇಳಿದ್ದಾರೆ. ಜಾರ್ಖಂಡ್‌ನ ಮಾಜಿ ಸಚಿವ ಕೆಎನ್ ತ್ರಿಪಾಠಿ ಅವರ ನಾಮಪತ್ರ ಶನಿವಾರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿ ಉಳಿದಿದ್ದಾರೆ.