ಕುಂದಾಪುರ: ಒಂದು ದಿನವೂ ಅಂಗಡಿ ಬಂದ್ ಮಾಡದ ಆಚಾರ್ಯರ ಪೇಪರ್ ಅಂಗಡಿಯೂ ಬಂದ್!

ಶ್ರೀಕಾಂತ ಹೆಮ್ಮಾಡಿ

ಕುಂದಾಪುರ: ಮೂರುವರೆ ದಶಕಗಳ ಸುದೀರ್ಘ ಸೇವೆಯಲ್ಲಿ ಒಂದು ದಿನವೂ ತಮ್ಮ ಅಂಗಡಿಯನ್ನು ಬಂದ್ ಮಾಡದ ಪೇಪರ್ ಏಜೆನ್ಸಿಯ ಶಂಕರ್ ಆಚಾರ್ಯರು ಸ್ವತಃ ಅಂಗಡಿಯನ್ನು ಬಂದ್ ಮಾಡಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿ ವಿಶೇಷ ಗಮನಸೆಳೆದಿದ್ದಾರೆ.

೧೯೮೫ ರಲ್ಲಿ ಕುಂದಾಪುರದ ಹಳೆ ಬಸ್ ಸ್ಟ್ಯಾಂಡ್ ಬಳಿಯ ಕಟ್ಟಡದಲ್ಲಿ ಪೇಪರ್ ಏಜೆನ್ಸಿಯ ಅಂಗಡಿ ಆರಂಭಿಸಿದ ಶಂಕರ ಆಚಾರ್ಯರು ಅಂದಿನಿಂದಲೂ ಯಾವುದೇ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಏನೇ ಮುಖ್ಯವಾದ ಬೇಡಿಕೆ ಇಟ್ಟು ಬಂದ್ ನಡೆಸಿದರೂ ಬೆಂಬಲ ಸೂಚಿಸಿರುವ ಇತಿಹಾಸವೇ ಇಲ್ಲ. ಆದರೆ ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಭಾನುವಾರ ಪ್ರಧಾನಿ ಮೋದಿಯವರು ಕರೆಕೊಟ್ಟ ಜನತಾ ಕರ್ಫ್ಯೂವನ್ನು ಬೆಂಬಲಿಸಿದ್ದಾರೆ.

ಭಾನುವಾರ ಎಂದಿಗಿಂತಲೂ ನಸುಕಿನ ಜಾವ ಎರಡು ಗಂಟೆಗೂ ಮೊದಲೇ ಕೆಲಸಕ್ಕೆ ಹಾಜರಾದ ಆಚಾರ್ಯರು ಹಾಸ್ಟೇಲ್, ಪೊಲೀಸ್ ಠಾಣೆ ಸೇರಿದಂತೆ ಸಾರ್ವಜನಿಕ ಬಸ್ ನಿಲ್ದಾಣಗಳಿಗೆ ಎಂದಿನಂತೆ ಉಚಿತವಾಗಿ ಪೇಪರ್ ಹಾಕಿದ್ದಾರೆ. ದಿನಂಪ್ರತಿ ಬೆಳಿಗ್ಗೆ ಪೇಪರ್ ಕೊಂಡುಕೊಳ್ಳುವ ಗ್ರಾಹಕರಿಗೆ ಪೇಪರ್ ನೀಡಿದ ಬಳಿಕ ಅಂಗಡಿಯನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಕನ್ನಡಪ್ರಭ ಪತ್ರಿಕೆ ಆರಂಭಗೊಂಡ ದಿನಗಳಿಂದಲೂ ಕುಂದಾಪುರ ಭಾಗದಲ್ಲಿ ಆಚಾರ್ಯರ ತಂದೆ ಪೇಪರ್ ಏಜೆನ್ಸಿ ನಡೆಸುತ್ತಿದ್ದರು. ಅವರ ನಿಧನದ ಬಳಿಕ ಶಂಕರ್ ಆಚಾರ್ಯರು ಕೈತುಂಬಾ ಸಂಬಳವಿರುವ ಬ್ಯಾಂಕ್ ಹುದ್ದೆಯನ್ನು ತೊರೆದು ತಮ್ಮ ತಂದೆಯ ಕಾಯಕವನ್ನು ಮುಂದುವರೆಸಿದ್ದರು. ಶಂಕರ್ ಆಚಾರ್ಯರ ಮಾಲೀಕತ್ವದ ಪೇಪರ್ ಅಂಗಡಿಗೀಗ ಮೂವತ್ತೈದು ವರ್ಷಗಳು!

ಪೋಷಕರು ನಿಧರಾದಾಗಲೂ ಮುಚ್ಚಿಲ್ಲ ಅಂಗಡಿ!
ಶಂಕರ್ ಆಚಾರ್ಯರ ತಮ್ಮ ತಂದೆ-ತಾಯಿ ನಿಧನ ಹೊಂದಿದ ಸಂದರ್ಭದಲ್ಲೂ ಅಂಗಡಿಯನ್ನು ಮುಚ್ಚಿರಲಿಲ್ಲ. ತಂದೆ-ತಾಯಿಯ ಅಂತ್ಯಸಂಸ್ಕಾರದ ಬಳಿಕ ಅಂಗಡಿಯನ್ನು ತೆರೆದು ಗ್ರಾಹಕರ ಸೇವೆಗೆ ಮುಂದಾಗಿದ್ದರು. ಮೂವತ್ತೈದು ವರ್ಷಗಳಲ್ಲಿ ತಮ್ಮ ಕುಟುಂಬದಲ್ಲಿ ಏನೇ ತೊಂದರೆಗಳಾದರೂ ಅವರು ತಮ್ಮ ಅಂಗಡಿಯನ್ನು ಮುಚ್ಚದಿರುವುದು ಅಚ್ಚರಿಯ ಸಂಗತಿ!

ಕೊರೋನಾ ವೈರಸ್ ಹರಡದಂತೆ ತಡೆಯಲು ಪ್ರಧಾನಮಂತ್ರಿಯವರು ಕರೆಕೊಟ್ಟ ಜನತಾ ಕರ್ಫ್ಯೂಗೆ ರಾಜ್ಯದೆಲ್ಲೆಡೆ ಉತ್ತಮ ಸ್ಪಂದನೆ ದೊರೆತಿರುವುದ ಖುಷಿಯ ವಿಚಾರ. ನನ್ನ ಮೂವತ್ತೈದು ವರ್ಷಗಳ ಪೇಪರ್ ಸೇವೆಯಲ್ಲಿ ಇಂದಿಗೂ ಒಂದು ದಿನವೂ ಅಂಗಡಿಗೆ ರಜೆ ನೀಡಿದ್ದಿಲ್ಲ. ನನ್ನ ತಂದೆ-ತಾಯಿ ತೀರಿಕೊಂಡಾಗಲೂ ಬಂದ್ ಮಾಡಿಲ್ಲ. ದೇಶದ ಜನರು ಆರೋಗ್ಯವಾಗಿರಲು ಪ್ರಧಾನಿಯವರು ಕರೆಕೊಟ್ಟ ಜನತಾ ಕರ್ಫ್ಯೂ ಬೆಂಬಲಿಸುವುದು ದೇಶದ ಪ್ರಜೆಯಾದ ನನ್ನ ಆದ್ಯ ಕರ್ತವ್ಯ.

–ಶಂಕರ್ ಆಚಾರ್ಯ, ಪೇಪರ್ ಏಜೆಂಟ್ ಕುಂದಾಪುರ